ADVERTISEMENT

ನವೆಂಬರ್‌ನಲ್ಲಿ ಜಾತಿವಾರು ಗಣತಿ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್‌ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 9:29 IST
Last Updated 19 ಸೆಪ್ಟೆಂಬರ್ 2014, 9:29 IST
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜ್‌ ಅವರು ಜಾತಿವಾರು ಗಣತಿಯ ಸಿದ್ಧತೆಗಳ ಪರಿಶೀಲನೆ ಮಾಡಿದರು
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜ್‌ ಅವರು ಜಾತಿವಾರು ಗಣತಿಯ ಸಿದ್ಧತೆಗಳ ಪರಿಶೀಲನೆ ಮಾಡಿದರು   

ಮಂಡ್ಯ: ಸ್ವಾತಂತ್ರ್ಯಾನಂತರ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾತಿವಾರು ಜನಗಣತಿಯನ್ನು ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ಮಾಡಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜ್‌ ಹೇಳಿದರು.
ಸರ್ಕಾರದ ಹಲವಾರು ಯೋಜನೆ ಜಾರಿ, ಮೀಸಲಾತಿ, ಸೌಲಭ್ಯಗಳನ್ನು ಒದಗಿಸುವಲ್ಲಿ ಇದು ಬಹಳ ಉಪಯೋಗಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಜಾತಿವಾರು ಜನಗಣತಿಗೆ ಪೂರಕ ವಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಪರಿಶೀಲನೆ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದಿನ ಬಾರಿ ನಡೆದ ಗಣತಿಗಳಲ್ಲಿ ಭಾಗವಹಿಸಿದವರನ್ನು, ವಿದ್ಯಾವಂತ ನಿರುದ್ಯೋಗಿಗಳನ್ನು ಬಳಸಿಕೊಂಡು ಗಣತಿ ಮಾಡಲಾಗುವುದು. ಇದಕ್ಕೆ ಅಗತ್ಯವಿರುವ ತರಬೇತಿಯನ್ನೂ ಕೂಡ ನೀಡಲಾಗುವುದು ಎಂದು ಹೇಳಿದರು.

ಜನರಲ್ಲಿಯೂ ಗಣತಿ ಕುರಿತು ಜಾಗೃತಿ ಮೂಡಿಸಲು ಮುದ್ರಣ ಮತ್ತು ದೃಶ್ಯ ಮಾಧ್ಯಮ ಬಳಸಿ ಕೊಳ್ಳಲಾಗುವುದು.ಬೀದಿ ನಾಟಕಗಳನ್ನು ಹಾಗೂ ಸಂಘ, ಸಂಸ್ಥೆಗಳ ಪ್ರತಿನಿಧಿಗಳಿಗೆ ಕಾರ್ಯಾಗಾರ ಆಯೋಜಿಸುವುದು, ಬ್ಯಾನರ್‌ ಅಳವಡಿಸುವ ಮೂಲಕ ಜನರಿಗೆ ತಿಳಿಸಲಾಗುವುದು ಎಂದರು.

ಯಾವ ಗ್ರಾಮದಲ್ಲಿ ಯಾವ ದಿನದಂದು ಗಣತಿ ನಡೆಯಲಿದೆ ಎಂಬ ಬಗ್ಗೆ ಮೊದಲೇ ಪ್ರಕಟಣೆ ನೀಡಲಾಗುವುದು. ಗಣತಿ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಜನರು ನಿಖರ ಮಾಹಿತಿ ಒದಗಿಸಿ ಸಹಕಾರ ನೀಡಬೇಕು ಎಂದು ಕೋರಿದರು.ಗಣತಿ ಕಾರ್ಯಕ್ಕೆ ₨ 117 ಕೋಟಿ ವೆಚ್ಚವಾಗಲಿದೆ. ಈ ಪ್ರಕ್ರಿಯೆಯಲ್ಲಿ 1.25 ಲಕ್ಷ ಜನರನ್ನು ಬಳಸಿಕೊಳ್ಳಲಾಗುವುದು. 1931ರ ಬಳಿಕ ಇದೇ ಮೊದಲ ಬಾರಿಗೆ ಜಾತಿವಾರು ಗಣತಿ ನಡೆಯಲಿದೆ ಎಂದು ಹೇಳಿದರು.

ಜಾತಿ ಗಣತಿ ಎಂದರೆ ಕೇವಲ ಅಂಕಿ–ಸಂಖ್ಯೆಗೆ ಸಂಗ್ರಹಕ್ಕೆ ಸೀಮಿತ ವಾಗುವುದಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಸಮೀಕ್ಷೆ ನಡೆಸಲಾಗುವುದು ಎಂದರು. ಜಾತಿ ನಮೂದಿಸುವುದು ಜನರಿಗೆ ಬಿಟ್ಟದ್ದು. ಯಾವುದೇ ಜಾತಿ, ಧರ್ಮ ಇಲ್ಲ ಎಂದರೂ ಅದನ್ನು ನಮೂದಿಸಿ ಕೊಳ್ಳಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಅಜಯ್‌ ನಾಗಭೂಣಷ್‌ ಉಪಸ್ಥಿತರಿದ್ದರು. ವಸತಿ ನಿಲಯಕ್ಕೆ ಭೇಟಿ: ಅಶೋಕನಗರದ ಇಂದಿರಾಗಾಂಧಿ ಮಹಿಳಾ ನರ್ಸಿಂಗ್‌ ವಿದ್ಯಾರ್ಥಿನಿಯರ ನಿಲಯಕ್ಕೆ ಅಧ್ಯಕ್ಷ ಕಾಂತರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.