ADVERTISEMENT

ನಾಯಕತ್ವ ಗುಣದ ಪ್ರಜ್ಞೆ ಅಗತ್ಯ

ಯುವ ಮುಂದಾಳತ್ವ ಶಿಬಿರದಲ್ಲಿ ಉಪವಿಭಾಗಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:36 IST
Last Updated 1 ಆಗಸ್ಟ್ 2015, 9:36 IST

ನಾಗಮಂಗಲ: ಭ್ರಷ್ಟಾಚಾರ ತಾಂಡವ ವಾಡುತ್ತಿರುವ ಇಂತಹ ಸನ್ನಿವೇಶದಲ್ಲಿ ಭವಿಷ್ಯದ ಉತ್ತಮ ಭಾರತಕ್ಕಾಗಿ ಬೇಕಾಗಿರುವ ಯುವಕರಿಗೆ ಸ್ವಾಭಿಮಾನ ಸಹಿತ ನಿಸ್ವಾರ್ಥ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳುವ ಪ್ರಜ್ಞೆ ಬೇಕು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಅಭಿಪ್ರಾಯ ಪಟ್ಟರು.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಪರಿಷತ್ ಮಂಡ್ಯ, ಸ್ನೇಹ ಯುವತಿ ಮತ್ತು ಮಹಿಳಾ ಮಂಡಳಿ ಮಾದಿಹಳ್ಳಿ ಹಾಗೂ ಹಾರ್ಟ್‌ ಸಂಸ್ಥೆ ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಪಟ್ಟಣದ ಬಿ.ಎಂ ರಸ್ತೆಯಲ್ಲಿರುವ ಹಾರ್ಟ್‌ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ಶಿಬಿರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ 15 ರಿಂದ 29 ವರ್ಷದೊಳಗಿನ ಯುವಶಕ್ತಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 40ರಷ್ಟಿದೆ. ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಯುವಶಕ್ತಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ದುಶ್ಚಟಗಳಿಂದ ದೂರವಿರಬೇಕು. ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಯುವಕರಿಗೆ ಸಮುದಾಯದ ಬಗ್ಗೆ ಚಿಂತನೆ ತರಬೇಕು.

ನಮ್ಮ ನಮ್ಮ ಮಟ್ಟಕ್ಕಾದರೂ ನಾವೇ ನಾಯಕತ್ವ ರೂಢಿಸಿಕೊಳ್ಳಬೇಕು. ಭ್ರಷ್ಟಚಾರದ ವಿರುದ್ಧ ಧ್ವನಿಯಾಗಬೇಕು. ಆವಿಷ್ಕಾರದ ಮನೋಜ್ಞಾನ ಇರಬೇಕು, ಅಲ್ಲದೆ ವಿದ್ಯಾವಂತ ಯುವಕರು ಯಾವುದೇ ಕಾರಣಕ್ಕೂ ಮೌಢ್ಯತೆಗೆ ಒಳಗಾಗ ಬಾರದು. ತ್ವತ್ವಜ್ಞಾನವನ್ನು ತಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಮುಂದಾಳತ್ವದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.

ವೇದಿಕೆಯಲ್ಲಿ ತಹಶೀಲ್ದಾರ್ ಎಂ. ಶಿವಲಿಂಗಮೂರ್ತಿ, ಜಿಲ್ಲಾ ಯುವ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸಿ. ವಿಜಯಕುಮಾರ್, ಮಂಡ್ಯ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ ಉಪಸ್ಥಿತರಿದ್ದರು. ನಾಗಮಂಗಲದ ರಾಷ್ಟ್ರೀಯ ಯುವ ಪಡೆಯ ಪಾಂಡಿದೊರೆ ಹಾಗೂ ಎಂ.ಸಿ. ಸೌಂದರ್ಯ ಸೇರಿದಂತೆ 75 ಹೆಚ್ಚು ಯುವ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.