ADVERTISEMENT

ನಿವೇಶನ, ಜಮೀನು ನೋಂದಣಿ ದುಬಾರಿ

ಮಾರ್ಗಸೂಚಿ ದರ ಪರಿಷ್ಕರಣೆ *ಶೇ 6ರಿಂದ 35ರಷ್ಟು ಏರಿಕೆ *ಏಪ್ರಿಲ್ 1ರಿಂದ ಜಾರಿ ಸಾಧ್ಯತೆ

ಬಸವರಾಜ ಹವಾಲ್ದಾರ
Published 3 ಮಾರ್ಚ್ 2017, 6:11 IST
Last Updated 3 ಮಾರ್ಚ್ 2017, 6:11 IST

ಮಂಡ್ಯ: ವಿದ್ಯುತ್‌ ದರ ಏರಿಕೆ ಪ್ರಸ್ತಾವ ಪೂರ್ಣಗೊಳ್ಳುವ ಮೊದಲೇ ರಾಜ್ಯ ಸರ್ಕಾರ ನಿವೇಶನ ಹಾಗೂ ಜಮೀನಿನ ಮಾರ್ಗಸೂಚಿ ದರ ಹೆಚ್ಚಿಸಲು  ಮುಂದಾಗಿದೆ. ಆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಚಿಂತಿಸಿದೆ.

ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ಯಲ್ಲಿ ನಡೆಯುತ್ತಿರುವ ದರಕ್ಕೂ ಅಂತರ ಇರುವುದನ್ನು ಗಮನಿಸಿರುವ ಸರ್ಕಾರ ಪ್ರತಿ ಮೀಟರ್‌ ದರ ಹೆಚ್ಚಿಸಲು ಈಗಾಗಲೇ ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ತೀರ್ಮಾನಿಸಿದೆ.

ಉಪ ಸಮಿತಿ ತೀರ್ಮಾನದಂತೆ ಶೇ 6ರಿಂದ 35ರಷ್ಟು ದರ ಹೆಚ್ಚಿಸಲಾಗು ತ್ತಿದೆ. ಸಾರ್ವಜನಿಕರಿಂದ ಆಕ್ಷೇಪಣೆ  ಕೂಡ ಆಹ್ವಾನಿಸಲಾಗಿದೆ. ಏಪ್ರಿಲ್‌ 1 ರಿಂದ ಹೊಸ ದರ ಪಟ್ಟಿ ಜಾರಿಗೊಳಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ.

ನಗರದ ಪ್ರತಿಷ್ಠಿತ ಬಡಾವಣೆಯಾದ ಅಶೋಕನಗರದಲ್ಲಿ ನಿವೇಶನದ ಮೌಲ್ಯವನ್ನು ಪ್ರತಿ ಚದರ ಮೀ.ಗೆ ಶೇ 12 ರಿಂದ ಶೇ 20ರ ವರೆಗೆ ಹೆಚ್ಚಿಸುವ ಪ್ರಸ್ತಾವ ಇಡಲಾಗಿದೆ.  ಅದೇ ರೀತಿ ನೆಹರೂ ನಗರ, ಅರ್ಕೇಶ್ವರ ನಗರ, ರಾಜಕುಮಾರ್ ಬಡವಾಣೆಯಗಳ ನಿವೇಶನ ನೋಂದಣಿ ದರ ಹೆಚ್ಚಿಸಲು ಮುಂದಾಗಿದೆ.

ವಾಣಿಜ್ಯ ಉದ್ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಬೆಂಗಳೂರು– ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ₹ 17,760ರಿಂದ ₹ 26 ಸಾವಿರಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಮಂಡ್ಯದ ಖುಷ್ಕಿ ಜಮೀನು ಪ್ರತಿ ಎಕರೆಗೆ ಮಾರ್ಗಸೂಚಿ ದರ ₹ 28  ಲಕ್ಷಕ್ಕೆ, ತರಿ ಜಮೀನಿನ ನೋಂದಣಿ ಮೊತ್ತವನ್ನು ₹ 34ಕ್ಕೆ ಹೆಚ್ಚಿಸಲು ಮುಂದಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನಿಗೆ ವಿವಿಧ ಪ್ರಮಾಣದಲ್ಲಿ ದರ ಹೆಚ್ಚಿಸಲಾಗಿದೆ.

ದರ ಹೆಚ್ಚಳ ಮಾಡುತ್ತಿರುವುದ ರಿಂದ ರಾಜ್ಯ ಸರ್ಕಾರದ ಆದಾಯದಲ್ಲಿ ಹೆಚ್ಚಳವಾಗಲಿದೆ. ಮಾರುಕಟ್ಟೆ ದರದಲ್ಲಿಯೂ ಇದರ ಆಧಾರದ ಮೇಲೆ ಹೆಚ್ಚಳ ಮಾಡಿದರೆ ಸ್ವಂತ ನಿವೇಶನ ಹೊಂದುವ ಬಡ ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ನೋಟು ರದ್ದತಿ  ಪರಿಣಾಮ ಈಗಾಗಲೇ ರಿಯಲ್‌ ಎಸ್ಟೇಟ್‌ ಹಾಗೂ ಜಮೀನು ಮಾರಾಟದಲ್ಲಿ ಕುಸಿತ ಉಂಟಾಗಿತ್ತು. ಈ ಬೆಲೆ ಏರಿಕೆಯಿಂದ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಮತ್ತಷ್ಟು ಬಿದ್ದು ಹೋಗಲಿದೆ ಎಂಬ ಆತಂಕ ಎದುರಾಗಿದೆ.

‘ನೋಂದಣಿ ದರ ಹೆಚ್ಚಳದಿಂದ ರಿಯಲ್‌ ಎಸ್ಟೇಟ್‌ ವಹಿವಾಟು ಕಡಿಮೆ ಆಗಲಿದೆ. ಜತೆಗೆ ಮಧ್ಯಮ ವರ್ಗದವರಿಗೆ ನಿವೇಶನ ಹೊಂದಲು ಸಾಧ್ಯವಾಗು ವುದಿಲ್ಲ’ ಎಂದು ಮಂಡ್ಯ ನಿವಾಸಿ ಅಶೋಕ್‌ ಹೇಳುತ್ತಾರೆ.

ಆಕ್ಷೇಪಣೆಗಳಿಗೆ ಆಹ್ವಾನ
ಮಂಡ್ಯ:
ತಾಲ್ಲೂಕು ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ತೀರ್ಮಾನದಂತೆ ತಾಲ್ಲೂಕಿನ ಉಪ ನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪರಿಷ್ಕೃತ ದರಪಟ್ಟಿಯ ಕರಡು ಪ್ರತಿಯನ್ನು ಉಪನೋಂದಣಿ, ನಗರಸಭೆ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಉಪನೋಂದಣಾಧಿಕಾರಿ ವಿ. ಶ್ರೀನಿವಾಸ ತಿಳಿಸಿದ್ದಾರೆ.

ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಮಾ.10ರೊಳಗೆ ಲಿಖಿತವಾಗಿ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.