ADVERTISEMENT

ಪೌರಕಾರ್ಮಿಕರ ಜೀವನ ಸುಧಾರಿಸಿಲ್ಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 8:50 IST
Last Updated 25 ಜುಲೈ 2017, 8:50 IST

ಮಳವಳ್ಳಿ: ಸಮಾಜ ಎಷ್ಟೇ ಅಭಿವೃದ್ಧಿಯಾಗಿದ್ದರೂ ಪೌರಕಾರ್ಮಿಕರ ಜೀವನಮಟ್ಟ ಇನ್ನೂ ಸುಧಾರಿಸಿಲ್ಲ ಎಂದು ಹೊರಗುತ್ತಿಗೆ ಪೌರಕಾರ್ಮಿಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಈಚೆಗೆ ಹೊರಗುತ್ತಿಗೆ ಪೌರಕಾರ್ಮಿಕರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಗಡಿಯಲ್ಲಿ ಯೋಧರು ಕಾಯುತ್ತಿರುವುದರಿಂದ ದೇಶದ ಜನ ನೆಮ್ಮದಿಯಾಗಿದ್ದಾರೆ. ನಗರ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೌರಕಾರ್ಮಿಕರು ಸ್ವಚ್ಛತೆ ಕಾಪಾಡುತ್ತಿರುವುದರಿಂದ ಜನರು ಆರೋಗ್ಯದಿಂದಿದ್ದಾರೆ ಎಂದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಪೌರಕಾರ್ಮಿಕರ ಸಾಮಾಜಿಕ, ಆರೋಗ್ಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಇನ್ನೂ ಸುಧಾ ರಿಸಿಲ್ಲ. ಕೆಲವು ಕಡೆ ಹೊರಗುತ್ತಿಗೆದಾರರ ವೇತನವನ್ನೂ ಸಹ ನೀಡದೆ ಗುಳುಂ ಮಾಡಿದ್ದಾರೆ ಎಂದರು.

ADVERTISEMENT

ಹೊರಗುತ್ತಿಗೆ ಪೌರಕಾರ್ಮಿಕರ ಏಜೆನ್ಸಿಯನ್ನು ಬಹುತೇಕ ಕಡೆ ಸ್ಥಳೀಯ ಜನಪ್ರತಿನಿಧಿಗಳೇ ತೆಗೆದುಕೊಂಡು ಪೌರ ಕಾರ್ಮಿಕರಿಗೆ ದೊರೆಯುವ ಸವಲತ್ತು ಗಳನ್ನು ನೀಡದೆ ವಂಚಿಸುತ್ತಿದ್ದಾರೆ. ಕೆಲವು ಕಡೆ ಜೀತದ ಆಳುಗಳಂತೆ ಕಾಣುತ್ತಿದ್ದಾರೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ, ಹೊರಗುತ್ತಿಗೆ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ನಾಗಣ್ಣಗೌಡ, ತಾಲ್ಲೂಕು ಘಟಕ ಅಅಧ್ಯಕ್ಷ ಬೋರಪ್ಪ, ಪುರಸಭೆ ಉಪಾಧ್ಯಕ್ಷೆ ಸುಮಾ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.