ADVERTISEMENT

ಪ್ರಕೃತಿ ಸೌಂದರ್ಯದ ರಂಗನಾಥಸ್ವಾಮಿ ಬೆಟ್ಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:32 IST
Last Updated 23 ಏಪ್ರಿಲ್ 2017, 10:32 IST
ಬೆಟ್ಟದ ಮೇಲಿರುವ ಐತಿಹಾಸಿಕ ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನ (ಎಡಚಿತ್ರ) ರಂಗನಾಥಸ್ವಾಮಿ ದೇವರು
ಬೆಟ್ಟದ ಮೇಲಿರುವ ಐತಿಹಾಸಿಕ ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನ (ಎಡಚಿತ್ರ) ರಂಗನಾಥಸ್ವಾಮಿ ದೇವರು   

ಕೆ.ಆರ್.ಪೇಟೆ: ರಾಮಾನುಜಾಚಾರ್ಯರ ಆಗಮನದಿಂದ ಪುನೀತವಾದ ಕ್ಷೇತ್ರಗಳಲ್ಲಿ   ತಾಲ್ಲೂಕಿನ ಬೂಕನಕೆರೆ ಸಮೀಪದ ಬೆಟ್ಟದಹೊಸೂರಿನ ಉದ್ಭವ ಬೋಳಾರೆ ರಂಗನಾಥ ಸ್ವಾಮಿ ಕ್ಷೇತ್ರವೂ ಒಂದೆಂಬ ಪ್ರತೀತಿ ಇದೆ.ಇಲ್ಲಿನ ಸ್ಥಾಣಾದ್ರಿ ಬೆಟ್ಟದಲ್ಲಿದ್ದ ಸ್ಥಾಣೇಶ್ವರಲಿಂಗವು ರಾಮಾನುಜಾಚಾರ್ಯರ  ಪಾದಸ್ಪರ್ಶದಿಂದ ಬೋಳಾರೆ ರಂಗನಾಥ ಎಂದು ಪರಿವರ್ತನೆಯಾಯಿತೆಂಬ ನಂಬಿಕೆ ಈ ಭಾಗದ ಜನರಲ್ಲಿ ಹಾಗೂ ಭಕ್ತರಲ್ಲಿ ಮನೆ ಮಾಡಿದೆ.

ಬೆಟ್ಟದ ಹೊಸೂರು ಪುರಾಣ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಚಿಕ್ಕ ತಿರುಪತಿ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.ಬೂಕನಕೆರೆ ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರದಲ್ಲಿ ಸ್ಥಾಣಾದ್ರಿ ಮತ್ತು ವಿಶಾಖಾದ್ರಿ ಎಂಬ ಎರಡು ಬೆಟ್ಟಗಳಿವೆ. ಭೂಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಸ್ಥಾಣಾದ್ರಿ ಬೆಟ್ಟದ ಮೇಲೆ ದೇವಸ್ಥಾನ ಇದ್ದು  ನೋಡಲು ನಯನ ಮನೋಹರವಾಗಿದೆ.

ವಿಜಯನಗರದ ಅರಸ ಎರಡನೇ ಬುಕ್ಕರಾಯ ಇಲ್ಲಿನ ದೇವರ ಮಹಿಮೆಯನ್ನು ಕೇಳಿ ತಿಳಿದುಕೊಂಡು, ದೇವಸ್ಥಾನಕ್ಕೆ ಬಂದು ಪೂಜೆ ನಡೆಸಿ ವಿಶಾಲವಾದ ಬುಕ್ಕನ ಕೆರೆ ನಿರ್ಮಿಸಿದನು ಎಂದು ಇತಿಹಾಸ ತಿಳಿಸುತ್ತದೆ.ಶಿವಲಿಂಗ ಬೋಳಾರೆ ರಂಗನಾಥನಾದ ಕತೆ: ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದ್ದ ಈ ಸ್ಥಾಣಾದ್ರಿ ಬೆಟ್ಟದ ಮಹಿಮೆ ಕೇನೋಪನಿಷತ್ತಿನಲ್ಲಿ ಬರುತ್ತದೆ. ಆರಂಭದಲ್ಲಿ ವಿಶಾಖಾದ್ರಿಯಲ್ಲಿದ್ದ ಸ್ಥಾಣೇಶ್ವರನು ಲಿಂಗಸ್ವರೂಪಿಯಾಗಿ ಸ್ಥಾಣಾದ್ರಿಯಲ್ಲಿ ಕಾಣಿಸಿಕೊಳ್ಳುತ್ತಾನೆ.

ADVERTISEMENT

ದೇವ–ದಾನವರ ಯುದ್ಧದಲ್ಲಿ ಜಯಶೀಲರಾದ ಸುರರು ತಾವೇ ಹೆಚ್ಚೆಂದು ಬೀಗುತ್ತಿರುವಾಗ ಇವರಿಗೆ ಬುದ್ಧಿ ಕಲಿಸಲು ಬ್ರಹ್ಮ ತೇಜಸ್ಸು ದೇವಲೋಕ ತ್ಯಜಿಸಿತಂತೆ. ಕತ್ತಲೆಯಿಂದ ಬೆದರಿದ ಸುರರು ತಮ್ಮ ತಪ್ಪನ್ನು ಅರಿತು ಬ್ರಹ್ಮ ತೇಜಸ್ಸನ್ನು ಹುಡುಕುತ್ತ ಹೊರಟಾಗ  ಅದು ಸ್ಥಾಣಾದ್ರಿಯಲ್ಲಿ ಲಿಂಗರೂಪದಲ್ಲಿ ಇದ್ದದ್ದು ಗೋಚರವಾಯಿತಂತೆ.  ಇಲ್ಲಿಗೆ ಬಂದು ಅವರು, ಪೂಜಿಸಿ ಕ್ಷಮೆ ಕೋರಿದರಂತೆ. ಅಂದಿನಿಂದ ಈ ಕ್ಷೇತ್ರ ಹೆಸರುವಾಸಿಯಾಯಿತಲ್ಲದೇ ಬ್ರಹ್ಮ ತೇಜಸ್ಸನ್ನು ಕಣ್ಣು ತುಂಬಿಕೊಳ್ಳಲು ಆದಿಶೇಷನೇ ಈ  ಸ್ಥಳಕ್ಕೆ ಬಂದು ಲಿಂಗವನ್ನು  ಸುತ್ತಿಕೊಂಡನಂತೆ. ಆಗ ಆದಿಶೇಷನ ಹೆಡೆಯೊಳಗಿನ ‘ವಿ’ ಆಕಾರ ಲಿಂಗದ ಮೇಲೆ ಕಾಣಿಸಕೊಂಡಿತಂತೆ.  ಅಂದಿನಿಂದ ಸ್ಥಾಣೇಶ್ವರ ಬೋಳಾರೆ ರಂಗನಾಥನಾಗಿ ಹೆಸರಾದನೆಂದು ಇಲ್ಲಿನ ಅರ್ಚಕರು ತಿಳಿಸುತ್ತಾರೆ.

ವಿಜಯನಗರದ ಅರಸರು, ಮೈಸೂರಿನ ಒಡೆಯರು  ದೇವಸ್ಥಾನಕ್ಕೆ ಅಪಾರವಾದ ದೇಣಿಗೆ ನೀಡಿದ್ದಲ್ಲದೇ,  ಈ ಸ್ಥಳಕ್ಕೆ  ಪ್ರತಿ ವರ್ಷ ಬಂದು ಆಶೀರ್ವಾದ ಪಡೆಯುತ್ತಿದ್ದರು.
ದೇವಸ್ಥಾನವು ಬೆಟ್ಟದ ಮೇಲಿರುವುದರಿಂದ ದೇವರ ದರ್ಶನದೊಂದಿಗೆ ಸುಂದರ ಪ್ರಕೃತಿಯನ್ನು ಕಾಣಬಹುದು. ಬೆಟ್ಟದ ಮೇಲೆ  ನೀರಿನ ಹೊಂಡಗಳಿವೆ. ಸುರಂಗದ ಮಾರ್ಗದಲ್ಲಿ ಸ್ಥಾಣುತೀರ್ಥವೂ ಇದೆ. ಇಲ್ಲಿಂದ ದೂರದ ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ, ಮೇಲುಕೋಟೆ ಬೆಟ್ಟ, ಗಜರಾಜನಗಿರಿ, ಬೇಬಿಬೆಟ್ಟ, ನಾರಾಯಣ ದುರ್ಗದ ಬೆಟ್ಟಗಳನ್ನು  ಕಣ್ತುಂಬಿಸಿಕೊಳ್ಳಬಹುದು.

ಶ್ರೀಕ್ಷೇತ್ರದ ಅಭಿವೃದ್ಧಿಯಲ್ಲಿ ಹಲವರು ತಮ್ಮನ್ನು ತೊಡಗಿಸಿಕೊಂಡಿದ್ದು, ಅದರಲ್ಲಿ ಬೂಕನಕೆರೆ ಗ್ರಾಮದವರಾದ ಸಮಾಜಸೇವಕ ಡಾ.ರಂಗಸ್ವಾಮಿ ಪಾಪಣ್ಣ ಒಬ್ಬರು. ಬ್ರಿಟನ್ ದೇಶದಿಂದ ಹಿಂದಿರುಗಿದ ನಂತರ ಶ್ರೀಕ್ಷೇತ್ರದ  ಅಭಿವೃದ್ಧಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.   ದೇವಸ್ಥಾನದಲ್ಲಿ ನವಗ್ರಹ ಮಂಟಪ, ಬೃಂದಾವನ, ಮುಖ್ಯದ್ವಾರ ಮಂಟಪ ನಿರ್ಮಿಸಿರುವುದಲ್ಲದೆ, ಕ್ಷೇತ್ರಕ್ಕೆ ಹೊಸರೂಪ ತಂದುಕೊಟ್ಟಿದ್ದಾರೆ ಎಂದು ಭಕ್ತರು ಹೇಳುತ್ತಾರೆ. ಇವರೊಂದಿಗೆ ಉದ್ಭವ ಬೋಳಾರೆ ರಂಗನಾಥಸ್ವಾಮಿ ಸೇವಾ ಟ್ರಸ್ಟ್  ಅಧ್ಯಕ್ಷ ಬೂಕನಕೆರೆ ವೆಂಕಟೇಶ್ ಹಾಗೂ ನಿರ್ದೇಶಕರು  ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯಲ್ಲಿ ವೈಭವದಿಂದ ಬ್ರಹ್ಮರಥೋತ್ಸವ ಹಾಗೂ ಅನ್ನ ಸಂತರ್ಪಣೆ  ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.

ಮಂಡ್ಯದಿಂದ  50 ಕಿ.ಮೀ. ಹಾಗೂ ಕೆ.ಆರ್.ಪೇಟೆಯಿಂದ 14 ಕಿ.ಮೀ. ದೂರದಲ್ಲಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ  ಈ ಗ್ರಾಮಕ್ಕೆ  ಹೋಗಲು ಸರಿಯಾದ ರಸ್ತೆ, ವಾಹನ ಸಂಪರ್ಕ ಇಲ್ಲ.  ಆಟೊ ಅಥವಾ ನಡೆದುಕೊಂಡು ಸ್ಥಳಕ್ಕೆ ಹೋಗಬೇಕು.  ಈ ಸ್ಥಳದ ಅಭಿವೃದ್ಧಿಗೆ ಜನ ಮತ್ತು ಸರ್ಕಾರ ಕೈಜೋಡಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.