ADVERTISEMENT

ಪ್ರೇಮಿಗಳ ಬೇರ್ಪಡಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:37 IST
Last Updated 12 ಜನವರಿ 2017, 6:37 IST

ಮದ್ದೂರು: 19ರ ಹರೆಯದ ಪ್ರೇಮಿಗಳ ವಿವಾಹ ಅಸಿಂಧುಗೊಳಿಸುವಂತೆ ಶಿಫಾರಸು ಮಾಡಿದ ಪೊಲೀಸರು ಜೋಡಿಯನ್ನು ಬೇರ್ಪಡಿಸಿದ ಪ್ರಸಂಗವೊಂದು ತಾಲ್ಲೂಕಿನಲ್ಲಿ ನಡೆದಿದೆ.

ಆತಗೂರು ಹೋಬಳಿ ಮಾರದೇವನಹಳ್ಳಿಯ ಮಹೇಶ್ (19) ಹಾಗೂ ಕುರಿದೊಡ್ಡಿ ಗ್ರಾಮದ 19ವರ್ಷದ ಯುವತಿ ಪ್ರೀತಿಸಿ ವಿವಾಹವಾಗಿದ್ದರು. 21 ವರ್ಷ ತುಂಬದ ಮಹೇಶ್‌ನನ್ನು ಯುವತಿ ವರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮಂಡ್ಯದಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಯುವತಿಗೆ ಮಹೇಶ್‌ನೊಂದಿಗೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಅನ್ಯಜಾತಿಗೆ ಸೇರಿದ ಪರಿಣಾಮ ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಜ.4ರಂದು ಮನೆ ತೊರೆದ ಯುವಕ ಮತ್ತು ಯುವತಿ ರಾಮನಗರ ಸಮೀಪದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮದುವೆಯಾಗಿ ಮಂಡ್ಯದಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಕೆಸ್ತೂರು ಠಾಣೆಯ ಪೊಲೀಸರು ಈತನನ್ನು ಮಂಡ್ಯದಲ್ಲಿ ಪತ್ತೆ ಮಾಡಿದ್ದಾರೆ.  ‘ಪ್ರೀತಿಸಿ ಮದುವೆಯಾಗಿದ್ದು, ಆತನೊಂದಿಗೆ ಸಂಸಾರ ನಡೆಸಲು ಅವಕಾಶ ನೀಡಿ’ ಎಂದು ಯುವತಿ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ. ಯುವಕನಿಗೆ 21 ವರ್ಷ ತುಂಬದ ಪರಿಣಾಮ ಜೋಡಿಯನ್ನು ಬೇರ್ಪಡಿಸಿ, ಯುವತಿಗೆ ಮಂಡ್ಯದ ಸ್ವಾಧಾರ ಕೇಂದ್ರದಲ್ಲಿ ಪುನವರ್ವಸತಿ ಕಲ್ಪಿಸಲಾಗಿದೆ.

‘ಕಾನೂನು ಪ್ರಕಾರ ಯುವಕನಿಗೆ 21 ವರ್ಷ ತುಂಬಿಲ್ಲ. ಯುವತಿಗೆ 18 ವರ್ಷ ತುಂಬಿದರೂ ಈ ವಿವಾಹ ಸಿಂಧುವಾಗುವುದಿಲ್ಲ. ಹೀಗಾಗಿ ಇಬ್ಬರೂ ಒಟ್ಟಿಗೆ ವಾಸಿಸಲು ಅವಕಾಶವಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ದಿವಾಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.