ADVERTISEMENT

ಪ್ರೇರಕರ ಮರುನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:08 IST
Last Updated 14 ಏಪ್ರಿಲ್ 2017, 8:08 IST

ಕೆ.ಆರ್.ಪೇಟೆ:  ತಾಲ್ಲೂಕಿನ ವಿವಿಧ ಸಾಕ್ಷರ ಭಾರತ್‌ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೇರಕರನ್ನು ಏಕಾಏಕಿ ಕೆಲಸದಿಂದ ಸರ್ಕಾರ ಬಿಡುಗಡೆ ಮಾಡಿರುವುದನ್ನು ಖಂಡಿಸಿ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರೇರಕರು ಗುರುವಾರ ಪ್ರತಿಭಟನೆ ನಡೆಸಿದರು.

‘ಸುಮಾರು 15 ವರ್ಷಗಳಿಂದ ತಾಲ್ಲೂಕಿನ ಸಾಕ್ಷರತಾ ಕೇಂದ್ರಗಳಲ್ಲಿ ಪ್ರೇರಕರಾಗಿ, ಕಡಿಮೆ ಗೌರವಧನ ಪಡೆದು ಅನಕ್ಷರಸ್ಥರಿಗೆ ಅಕ್ಷರ
ಕಲಿಸುವ ಕೆಲಸವನ್ನು ಮಾಡಿದ್ದೇವೆ.

2003ರಿಂದ ಮುಂದುವರಿಕೆ ಶಿಕ್ಷಣ ಕೇಂದ್ರಗಳಲ್ಲಿ ಹಾಗೂ 2010ರಿಂದ ಲೋಕ ಶಿಕ್ಷಣ ಕೇಂದ್ರ ಪ್ರೇರಕರಾಗಿ ಹಾಗೂ ಉಪಪ್ರೇರಕರಾಗಿ ಕಾರ್ಯ ನಿರ್ವಹಿಸಿದ್ದೇವೆ. ಈಗ  ನಮ್ಮನ್ನು ಏಕಾಏಕಿ ಕೆಲಸದಿಂದ ಬಿಡುಗಡೆ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ಪ್ರೇರಕರಿಗೆ ಗ್ರಾಮ ಪಂಚಾಯಿತಿ ಗಳಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ, ಬಿಲ್ ಕಲೆಕ್ಟರ್ ಹುದ್ದೆ ಅಥವಾ ನೀರುಗಂಟಿ ಹುದ್ದೆಗಳನ್ನಾದರೂ ನೀಡಿ ಎಂದು ಒತ್ತಾಯಿಸಿದರು.

ಭಾರತೀಪುರ ನಟರಾಜು, ಹರಳಹಳ್ಳಿ ಶಿವರಾಂ, ಅಗ್ರಹಾರಬಾಚಹಳ್ಳಿ ನಳಿನಾಲಕ್ಷ್ಮಿ, ಸಾರಂಗಿ ಕುಮಾರ್, ಅಘಲಯ ತಮ್ಮಣ್ಣನಾಯಕ, ಅಕ್ಕಿಹೆಬ್ಬಾಳು ಭಾರತೀ, ಹರಿಹರಪುರ ಶಿವಕುಮಾರ್, ತೆಂಡೇಕೆರೆ ರಾಧಾ, ಹಿರೀಕಳಲೆ ಬಸವರಾಜು  ಸೇರಿದಂತೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಪ್ರೇರಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ನಂತರ ತಾಲ್ಲೂಕು ಸಂಯೋಜಕಿ ತುಳಸಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.