ADVERTISEMENT

ಬರ: ಉದ್ಯಮ, ಉದ್ಯೋಗಗಳೆರಡಕ್ಕೂ ನಷ್ಟ

ಕಾರ್ಯಾರಂಭ ಮಾಡದ ಕಾರ್ಖಾನೆಗಳು, ರೈಸ್‌ ಮಿಲ್‌ಗಳು; ಇತ್ತ ರೈತರು– ಅತ್ತ ಕಾರ್ಮಿಕರ ಗೋಳು

ಬಸವರಾಜ ಹವಾಲ್ದಾರ
Published 17 ಏಪ್ರಿಲ್ 2017, 6:41 IST
Last Updated 17 ಏಪ್ರಿಲ್ 2017, 6:41 IST
ಮಂಡ್ಯ: ಬರ ಬಂದರೆ ಕೇವಲ ರೈತರು, ಬೆಳೆ ಹಾಗೂ ಕುಡಿಯುವ ನೀರಿಗೆ ಮಾತ್ರ ತೊಂದರೆ ಆಗುವುದಿಲ್ಲ.  ಉದ್ಯಮ ಕ್ಷೇತ್ರ, ಉದ್ಯೋಗಿಗಳಿಗೂ ಬರದ ಬಿಸಿ ತಟ್ಟುತ್ತದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗುತ್ತದೆ. ಕೃಷಿಕರು, ಕೂಲಿ ಕಾರ್ಮಿಕರು ಗುಳೆ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
 
ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿಲ್ಲದಿರುವುದರಿಂದ ರೈತರು ಕಬ್ಬು, ಭತ್ತದ ಬೆಳೆ ಬೆಳೆದಿಲ್ಲ. ಇದರಿಂದಾಗಿ  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕೈಗಳಿಗೆ ಉದ್ಯೋಗ ವಿಲ್ಲದಂತಾಗಿದೆ. ಸಕ್ಕರೆ ಕಾರ್ಖಾನೆಗಳು, ಅಕ್ಕಿ ಗಿರಣಿಗಳು, ಅಲೆಮನೆಗಳು ಬಂದ್‌ ಆಗಿವೆ.
 
ಜಿಲ್ಲೆಯಲ್ಲಿ 40,000 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ಈ ಬಾರಿ ನೀರಿನ ಕೊರತೆಯಿಂದಾಗಿ ಕಬ್ಬು ಬೆಳೆ ಬೆಳೆಯುವುದಕ್ಕೆ ರೈತರು ಮುಂದಾಗಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿರು ಆರು ಸಕ್ಕರೆ ಕಾರ್ಖಾನೆಗಳಿಗೆ ಕೆಲಸ ಇಲ್ಲದಂತಾಗಿದೆ.
 
ಕಬ್ಬಿನ ಕೊರತೆ ಇದ್ದದ್ದರಿಂದ ರೈತರು ಮೈಷುಗರ್‌ ಕಾರ್ಖಾನೆ ಆರಂಭಿಸುವಂತೆ ಒತ್ತಡ ಹಾಕಲು ಹೋಗಲಿಲ್ಲ. ಹಾಗಾಗಿ ಕಾರ್ಖಾನೆಯೂ ಈ ವರ್ಷವೂ ಕಾರ್ಯಾರಂಭ ಮಾಡಲಿಲ್ಲ.

ಇನ್ನೊಂದೆಡೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯು ಕಬ್ಬು ಅರೆಯಲು ಸಿದ್ಧವಾಗಿತ್ತು. ಆದರೆ, ಕಬ್ಬಿನ ಕೊರತೆಯಿಂದಾಗಿ ಆರಂಭವಾಗಲಿಲ್ಲ. ಎರಡೂ ಕಾರ್ಖಾನೆಗಳ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.
 
ಜಿಲ್ಲೆಯಲ್ಲಿ ಮೂರು ಖಾಸಗಿ ಕಾರ್ಖಾನೆಗಳ ಸ್ಥಿತಿಯೂ ಭಿನ್ನವಾ ಗಿರಲಿಲ್ಲ. ಈ ಕಾರ್ಖಾನೆಗಳು ಕಾರ್ಯಾರಂಭ ಮಾಡಿದರೂ ಕಬ್ಬಿನ ಕೊರತೆಯಿಂದಾಗಿ ಬೇಗನೆ ಬಂದ್‌ ಆದವು. ಕಬ್ಬು ಕಡಿಯುವ ಕೆಲಸ ಮಾಡುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲ ದಂತಾಯಿತು. ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಲಾರಿಗಳವರಿಗೂ ಕೆಲಸವಿಲ್ಲ ದಂತಾಗಿದೆ. ಸಾವಿರಾರು ಕುಟುಂಬಗಳು ತೊಂದರೆಗೆ ಸಿಲುಕಿವೆ.
 
ಕಬ್ಬಿನ ಕೊರತೆಯಿಂದ ಕೆಲವು ಕಡೆಗಳಲ್ಲಿ ಅಲೆಮನೆಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜಿಲ್ಲೆಯಲ್ಲಿ 2000 ಸಾವಿರದಷ್ಟು ಅಲೆಮನೆಗಳಿದ್ದು, ಆ ಪೈಕಿ ಅರ್ಧದಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.
 
ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ನೀರಿನ ಕೊರತೆಯಿಂದಾಗಿ ಎರಡನೇ ಬೆಳೆಯನ್ನು ಬೆಳೆದಿಲ್ಲ. ಹಾಗಾಗಿ ಜಿಲ್ಲೆಯಲ್ಲಿರುವ 200ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿಗೆ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸವಿಲ್ಲದಂತಾಗಿದೆ.
 
ನಿತ್ಯ ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದ ಅಕ್ಕಿ ಗಿರಣಿಗಳು ಭತ್ತದ ಕೊರತೆಯಿಂದಾಗಿ ಬಂದ್ ಆಗಿವೆ. ಮುಂದಿನ ಡಿಸೆಂಬರ್‌ವರೆಗೂ ಅವುಗಳು ಆರಂಭವಾಗುವುದಿಲ್ಲ. ಅಕ್ಕಿ ಗಿರಣಗಿಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಮಿಕರ ಕುಟುಂಬಗಳು ಕೆಲಸ ಹುಡುಕಿಕೊಂಡು ಬೇರೆ ಕಡೆಗೆ ಹೋಗಬೇಕಾದ ಸ್ಥಿತ ಎದುರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.