ADVERTISEMENT

ಬೆಟ್ಟ ಹತ್ತಿ ಇಳಿದು ಸಂಭ್ರಮಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 8:34 IST
Last Updated 9 ಅಕ್ಟೋಬರ್ 2017, 8:34 IST
ಬೆಟ್ಟ ಹತ್ತಿ ಇಳಿದು ಸಂಭ್ರಮಿಸಿದ ಪೊಲೀಸರು
ಬೆಟ್ಟ ಹತ್ತಿ ಇಳಿದು ಸಂಭ್ರಮಿಸಿದ ಪೊಲೀಸರು   

ಶ್ರೀರಂಗಪಟ್ಟಣ: ಕರಿಘಟ್ಟದಲ್ಲಿ ಭಾನುವಾರ ಪೊಲೀಸರು ಸರಸರನೆ ಬೆಟ್ಟ ಹತ್ತಿದರು. ಕಲ್ಲು–ಮುಳ್ಳಿನ ದಾರಿಯಲ್ಲಿ ನಡೆದಾಡಿದರು. ಹೆಬ್ಬಂಡೆಗಳು, ಕೋಡುಗಲ್ಲುಗಳು, ಬಗೆ ಬಗೆಯ ಮರ– ಮಟ್ಟುಗಳನ್ನು ಮುಟ್ಟಿ ಆನಂದಿಸಿದರು. ಕಣ್ಣಳತೆಯ ದೂರಕ್ಕೂ ಕಾಣುವ ನದಿ, ನಗರಗಳು, ಬೆಟ್ಟದ ಸರಹದ್ದುಗಳನ್ನು ಕಣ್ತುಂಬಿಕೊಂಡರು. ಪರಗೋಲದಲ್ಲಿ ಕುಳಿತು ಉಪಾಹಾರ ಸೇವಿಸಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರ ನೇತೃತ್ವದಲ್ಲಿ ನಡೆದ ಚಾರಣದಲ್ಲಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಹಂತದ ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂಜಾನೆ 5 ಗಂಟೆಗೆ ಪೊಲೀಸರು ಕರಿಘಟ್ಟಕ್ಕೆ ಬರಲಾರಂಭಿಸಿದರು. ಕೆಲವರು ಘಟ್ಟದ ಬುಡದಿಂದ ಮೆಟ್ಟಿಲುಗಳ ಮೂಲಕ ಹತ್ತಿದರೆ ಮತ್ತೆ ಕೆಲವರು ಶ್ರೀನಿವಾಸ ದೇಗುಲದ ವರೆಗೆ ವಾಹನಗಳಲ್ಲಿ ತೆರಳಿ ಅಲ್ಲಿಂದ ಮುಂದೆ ಚಾರಣ ನಡೆಸಿದರು.

ಶ್ರೀರಂಗಪಟ್ಟಣ– ಬನ್ನೂರು ರಸ್ತೆಯಿಂದ ದೇವಾಲಯದ ವರೆಗೆ 450 ಮೆಟ್ಟಿಲುಗಳಿದ್ದು, ಪೊಲೀಸರು ಸ್ಪರ್ಧೆಗೆ ಬಿದ್ದವರಂತೆ ಹತ್ತಿ ಹೋದರು. ಅಲ್ಲಿಂದ ಪರಗೋಲಾ ಮಾರ್ಗವಾಗಿ ಕೋಡುಗಲ್ಲು ಇರುವ ಕುದುರೆ ಲಾಯದತ್ತ ಪಯಣ ಬೆಳೆಸಿದರು.

ADVERTISEMENT

ಕಡಿದಾದ ಮಣ್ಣು–ಕಲ್ಲಿನ ರಸ್ತೆಯಲ್ಲಿ ಉತ್ಸಾಹದಿಂದ ಘಟ್ಟದ ತುದಿಯತ್ತ ಮುನ್ನಡೆದರು. ಎಸ್ಪಿ ರಾಧಿಕಾ ಮತ್ತು ಎಎಸ್ಪಿ ಲಾವಣ್ಯ ಮುಂಚೂಣಿಯಲ್ಲಿ ಸಾಗಿದರು. ಇತರರು ಅವರನ್ನು ಹಿಂಬಾಲಿಸಿದರು. ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ಕೃಷ್ಣರಾಜಪೇಟೆ, ನಾಗಮಂಗಲ ಇತರೆಡೆಗಳಿಂದ ಬಂದವರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

ಸಮುದ್ರ ಮಟ್ಟದಿಂದ 2,697 ಅಡಿಗಳಷ್ಟು ಎತ್ತರದಲ್ಲಿರುವ ಕರಿಘಟ್ಟವನ್ನು ಉತ್ಸಾಹದಿಂದ ಏರಿದ ಪೊಲೀಸರು ತಂಗಾಳಿಗೆ ಮೈಯೊಡ್ಡಿ ಕೆಲಕಾಲ ವಿಶ್ರಮಿಸಿದರು. ಅಲ್ಲಿಂದ ವಾಪಸ್‌ ಶ್ರೀನಿವಾಸ್‌ ದೇಗುಲದತ್ತ ಇಳಿದು ಬಂದರು. ದೇವಾಲಯದ ಎದುರು ಯೋಗ, ಧ್ಯಾನ, ಪ್ರಾಣಾಯಾಮ ಮಾಡಿದರು.

‘ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಒತ್ತಡ ನಿವಾರಿಸಿಕೊಳ್ಳಲು ದೈಹಿಕ ಮತ್ತು ಮಾನಸಿಕ ಕ್ಷಮತೆ ಮುಖ್ಯ. ಹಾಗಾಗಿ ಪಿಎಸ್‌ಐ ಮತ್ತು ಅವರ ಮೇಲ್ಮಟ್ಟದ ಅಧಿಕಾರಿಗಳಿಗೆ ಕರಿಘಟ್ಟ ಪ್ರಕೃತಿ ತಾಣದಲ್ಲಿ ಚಾರಣ ಏರ್ಪಡಿಸಲಾಗಿದೆ.

ಯೋಗ, ಪ್ರಾಣಾಯಾಮವನ್ನೂ ಹೇಳಿಕೊಡಲಾಗಿದೆ. 42 ದಿನಗಳ ಕಾಲ ಮನೆಯಲ್ಲೇ ಅಭ್ಯಾಸ ಮಾಡುವಂತೆ ಸೂಚಿಸಲಾಗಿದೆ. ಈಜು, ಸೈಕ್ಲಿಂಗ್‌, ಓಟದಂತಹ ಸ್ಫೂರ್ತಿದಾಯಕ ಚಟುವಟಿಕೆಗಳನ್ನು ಏರ್ಪಡಿಸುವ ಉದ್ದೇಶವೂ ಇದೆ. ಇಂತಹ ಕಾರ್ಯಗಳಿಂದ ದಕ್ಷತೆ ಹೆಚ್ಚುವ ಜತೆಗೆ ಅಧಿಕಾರಿಗಳಲ್ಲಿ ಪರಸ್ಪರ ಹೊಂದಾಣಿಕೆ ಮೂಡುತ್ತದೆ’ ಎಂದು ಎಸ್ಪಿ ಜಿ. ರಾಧಿಕಾ ಹೇಳಿದರು.

‘ಕರಿಘಟ್ಟದಲ್ಲಿ ಚಾರಣ ಏರ್ಪಡಿಸಿದ್ದರಿಂದ ಇಡೀ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಒಂದೆಡೆ ಸೇರಲು ಅವಕಾಶ ಸಿಕ್ಕಂತಾಗಿದೆ. ಎಸ್ಪಿ ಜಿ. ರಾಧಿಕಾ ಅವರ ಪ್ರೇರಣೆಯಿಂದ ನಮ್ಮೆಲ್ಲರಲ್ಲಿ ಉತ್ಸಾಹ ಇಮ್ಮಡಿಸಿದೆ. ಆಕರ್ಷಕ ಪ್ರಕೃತಿ ತಾಣದ ಪರಿಚಯವೂ ಆಗಿದೆ. ವರ್ಷಕ್ಕೊಮ್ಮೆ ಇಂತಹ ಚಟುವಟಿಕೆಗಳನ್ನು ನಡೆಸುವುದರಿಂದ ನಮ್ಮಲ್ಲಿ ಹುರುಪು ಹೆಚ್ಚುತ್ತದೆ’ ಎಂದು ಪಾಂಡವಪುರ ಠಾಣೆಯ ಸಿಪಿಐ ದೀಪಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.