ADVERTISEMENT

ಬೆದರಿಕೆ ಹಾಕಿಲ್ಲ; ಇದು, ರಾಜಕೀಯ ಷಡ್ಯಂತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:09 IST
Last Updated 19 ಜುಲೈ 2017, 10:09 IST

ಮಂಡ್ಯ: ‘ಕಲ್ಲು ಗಣಿಗಾರಿಕೆ ಬೆಳವಣಿಗೆಗೆ ಸಂಬಂಧಿಸಿ ನಾನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಚುನಾವಣೆ ವರ್ಷದಲ್ಲಿ ಇದೊಂದು ರಾಜಕೀಯ ಷಡ್ಯಂತ್ರ. ಇದಕ್ಕೆ ಮಣಿಯುವುದಿಲ್ಲ’ ಎಂದು ಸಂಸದ ಸಿ.ಎಸ್.ಪುಟ್ಟರಾಜು ಮಂಗಳವಾರ ಪ್ರತಿಪಾದಿಸಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, ‘ಕ್ಷೇತ್ರದಲ್ಲಿ ಕ್ರಷರ್‌ಗಳ ಸಂಖ್ಯೆ 18 ಇದ್ದದ್ದು ಅವರು ಶಾಸಕರಾದ ಬಳಿಕ 48ಕ್ಕೆ ಏರಿದೆ. ತಾಕತ್ತಿದ್ದರೆ ಪುಟ್ಟಣ್ಣಯ್ಯ ಅವರು ಈ ಅಕ್ರಮ ಕ್ರಷರ್‌ಗಳನ್ನು ಬಂದ್‌ ಮಾಡಿಸಲಿ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳ ವೀಕ್ಷಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 1ರಂದು ಬಂದಿದ್ದರು. ಬಿಗುವಿನ ಸ್ಥಿತಿ ಇರುವುದನ್ನು ಅರಿತು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದೇನೆ.  ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲು ಕೋರಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಘಟನೆ ಸಂಬಂಧ ಡಿಎಫ್‌ಒ ಅವರು ಜಿಲ್ಲಾಧಿಕಾರಿಗೆ ನೀಡಿರುವ ವರದಿಯಲ್ಲಿ ಅಂಥ ಯಾವುದೇ ಉಲ್ಲೇಖ ಇಲ್ಲ. ಇಲಾಖೆ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು ಎಂದಿದೆ. ಜೀವನಕ್ಕೆ ಆಧಾರವಾಗಿರುವ ಕ್ರಷರ್‌ ಅನ್ನೇ ಮುಚ್ಚಿಸಲು ಬಂದರೆ ಅದನ್ನೇ ನಂಬಿಕೊಂಡಿರುವ ಕುಟುಂಬಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರು.

‘ಬೆದರಿಕೆ ಹಾಕಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಅರಣ್ಯ ಇಲಾಖೆ ಅಧಿಕಾರಿಗಳು ಆ ದಿನ ಚಿನಕುರಳಿ, ಹೊನಗಾನಹಳ್ಳಿ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಭೇಟಿ ನೀಡಿದ್ದಾಗ ಬಿಗುವಿನ ಸ್ಥಿತಿ ಇದ್ದುದು ನಿಜ. ತಕ್ಷಣ ಸ್ಥಳಕ್ಕೆ ಧಾವಿಸಿದ ನಾನು ಪರಿಸ್ಥಿತಿ ತಿಳಿಗೊಳಿಸಿದ್ದೇನೆ’ ಎಂದರು.

ಕ್ರಷರ್‌ ಅನ್ನು ನನ್ನ ಕುಟುಂಬ ತಲೆಮಾರಿನಿಂದ ನಿಭಾಯಿಸುತ್ತಿದೆ. ಕಾನೂನುಬದ್ಧವಾಗಿ ನಡೆಸುತ್ತಿದೆ. ನಮ್ಮದು ಸೇರಿ ಮೂರು ನಿಯಮಬದ್ಧವಾಗಿ ನಡೆಯುತ್ತಿವೆ. ಉಳಿದ ಕ್ರಷರ್‌ಗಳ ಬಗ್ಗೆ ಎಷ್ಟು ಅಕ್ರಮ? ಎಷ್ಟು ಜನರನ್ನು ಕೇರಳದಿಂದ ಕರೆಸಲಾಗಿದೆ ಎಂಬ ಮಾಹಿತಿ ಪುಟ್ಟಣ್ಣಯ್ಯ ಅವರಿಗೇ ಇರಬೇಕು’ ಎಂದು ವ್ಯಂಗ್ಯವಾಡಿದರು.

ವಾಸ್ತವವಾಗಿ ಚಿನಕುರಳಿ, ಹೊನಗಾನಹಳ್ಳಿ ಬಳಿ ಕಲ್ಲು ಬ್ಲಾಸ್ಟ್‌ ಮಾಡುತ್ತಿಲ್ಲ. ದೈಹಿಕ ಶ್ರಮದಿಂದಲೇ ಕಲ್ಲು ಒಡೆಯಲಾಗುತ್ತಿದೆ. ಆಸುಪಾಸಿನ ಗ್ರಾಮಗಳ ಅನೇಕ ಕುಟುಂಬಗಳು ಬದುಕಿಗೆ ಇದನ್ನು ಅವಲಂಬಿಸಿವೆ. ಬೇಕಿದ್ದರೆ ಯಾರು ಬೇಕಾದರೂ ಸ್ಥಳ ಪರಿಶೀಲನೆ ನಡೆಸಬಹುದು ಎಂದು ಸವಾಲು ಹಾಕಿದರು.

‘ಇದು ಅಲ್ಲಿನ ಜನರ ಪ್ರಶ್ನೆ. ಉದ್ದೇಶಿತ ಭೂಮಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಗೋಮಾಳವಾಗಿದೆ. ಅರಣ್ಯ ಭೂಮಿಯಲ್ಲ.  2000ನೇ ಇಸವಿಯಿಂದಲೂ ಅಲ್ಲಿ ಕ್ರಷರ್ ನಡೆಯುತ್ತಿದ್ದು, ನಿಯಮಾನುಸಾರ ಎಲ್ಲ ಅನುಮತಿ ಪಡೆಯಲಾಗಿದೆ. ಸಂಬಂಧಿಸಿದ ದಾಖಲೆಗಳೂ ಇವೆ’ ಎಂದು ಪುಟ್ಟರಾಜು ತಿಳಿಸಿದರು.

ಕಾನೂನು ಪ್ರಕಾರ ನಡೆಯುತ್ತಿರುವ ಅದನ್ನು ನಿಲ್ಲಿಸಿ, ಜನರನ್ನು ದಿಕ್ಕುತಪ್ಪಿಸಲು ಮುಂದಾದರೆ ಉಗ್ರ ಹೋರಾಟ ನಡೆಯಲಿದೆ. ಆ ಭಾಗದ ಜನರಿಗಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದರು.ತಾ.ಪಂ. ಅಧ್ಯಕ್ಷ ಬೀರಪ್ಪ, ಜಿ.ಪಂ. ಸದಸ್ಯರಾದ ತಿಮ್ಮೇಗೌಡ, ಅಕ್ಷಯ್‌, ಶಾಂತಲಾ, ಶಂಕರ್‌, ಅಶೋಕ್‌ಕುಮಾರ್‌, ಪ್ರಕಾಶ್‌ ಉಪಸ್ಥಿತರಿದ್ದರು.

‘ಶಾಸಕರು 4 ವರ್ಷದಲ್ಲಿ ಎಷ್ಟು ಅಕ್ರಮ ಕ್ರಷರ್‌ ನಿಲ್ಲಿಸಿದ್ದಾರೆ?’
ಮಂಡ್ಯ: ಮೇಲುಕೋಟೆ ಕ್ಷೇತ್ರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸುತ್ತೇನೆ ಎಂದು ಅಧಿಕಾರಕ್ಕೆ ಬಂದ ಕೆ.ಎಸ್‌. ಪುಟ್ಟಣ್ಣಯ್ಯ ಈ ನಾಲ್ಕು ವರ್ಷದಲ್ಲಿ ಎಷ್ಟು ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿದ್ದಾರೆ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಪ್ರಶ್ನಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಕ್ರಷರ್, ಕಲ್ಲು ಗಣಿಗಾರಿಕೆ ಹೆಚ್ಚಿವೆ ಎಂದು ಅವರು ಆರೋಪಿಸಿದರು. ಕಲ್ಲುಗಣಿಗಾರಿಕೆಗೆ ಅನುಮತಿ ಕೋರಿ ಬಾವಮೈದುನನಿಂದಲೇ ಅವರು ಅರ್ಜಿ ಹಾಕಿಸಿದ್ದಾರೆ. ಈ ಬಗ್ಗೆ ಶಾಸಕರ ಜತೆ ನೇರ ಚರ್ಚೆಗೆ ಸಿದ್ಧ. ಏನು ದಾಖಲೆಗಳಿವೆಯೋ ಅದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ನನ್ನ ಅಣ್ಣನ ಮಗ ನಡೆಸುತ್ತಿರುವ ಕ್ರಷರ್‌ಗೆ ₹ 40 ಲಕ್ಷ ದಂಡ ಹಾಕಲಾಗಿದೆ ಎಂದು ಹೇಳಲಾಗಿದೆ. ಪರಿಷ್ಕೃತ ಲೆಕ್ಕಾಚಾರ ಹಾಕಿ ಹೆಚ್ಚುವರಿಯಾಗಿ ಅಷ್ಟು ರಾಜಧನ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಕ್ರಷರ್‌ಗೆ ನೋಟಿಸ್‌ ಕೂಡಾ ಬಂದಿಲ್ಲ’ ಎಂದು ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.