ADVERTISEMENT

ಬೆಳೆಯೂ ಇಲ್ಲ, ಮೇವೂ ಇಲ್ಲ, ಪಾಂಡವಪುರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:38 IST
Last Updated 24 ಏಪ್ರಿಲ್ 2017, 5:38 IST
ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು
ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು   

ಪಾಂಡವಪುರ: ನೀರಾವರಿ ಪ್ರದೇಶ ಹೊಂದಿದ್ದರೂ ಅಣೆಕಟ್ಟೆಯಲ್ಲಿ ನೀರಿಲ್ಲದೆ ಇರುವುದರಿಂದ ತಾಲ್ಲೂಕಿನ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತರ್ಜಲ ಕುಸಿದಿದೆ. ಕೃಷಿಗಲ್ಲ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ.

ಜೀವನಾಡಿ ಅಣೆಕಟ್ಟಾದ ಕೆಆರ್‌ಎಸ್‌ ಭರ್ತಿಯಾಗದ್ದರಿಂದ ಭತ್ತದ ಬೇಸಿಗೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಲದೆ, ನೀರಿನ ಕೊರತೆಯಿಂದಾಗಿ ರೈತರಿಗೆ ಕಬ್ಬು ಬೆಳೆಯಲೂ ಸಾಧ್ಯವಾ ಗಿಲ್ಲ. ಕಬ್ಬಿನ ಕೊರತೆಯಿಂದಾಗಿ ಈ ವರ್ಷ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಬಂದ್ ಆಗಿದೆ.

ಮುಂದಿನ ವರ್ಷವೂ ಕಬ್ಬು ದೊರೆಯುವುದು ಕಷ್ಟವಾಗಲಿದೆ ಎಂಬ ಸ್ಥಿತಿ ಇದೆ. ಸಾವಿರಾರು ಕೈಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ನೀಡು ತ್ತಿದ್ದ ಕಾರ್ಖಾನೆ ಬಂದ್ ಆಗಿರುವುದು ಆರ್ಥಿಕ ಸಂಕಷ್ಟ ಹೆಚ್ಚಿಸಿದೆ. ಅಲೆಮನೆ ಗಳೂ ಕುಂಟುತ್ತಾ ನಡೆಯುತ್ತಿವೆ.

ADVERTISEMENT

ಬಹುತೇಕ ಕೆರೆ, ಬಾವಿಗಳು ಒಣಗಿ ಹೋಗಿವೆ. ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ತತ್ವಾರ ಬಂದಿದೆ.

ತಾಲ್ಲೂಕಿನ 175 ಹಳ್ಳಿಗಳ ಪೈಕಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹಲವ ಗ್ರಾಮ ಮತ್ತು ಪಟ್ಟಣ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ನಾಲೆಗಳಲ್ಲಿಯೂ ನೀರಿಲ್ಲದ ಕಾರಣ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಕಡೆ ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ಹಣ ಪಾವತಿಸಿ ನೀರು ಪಡೆದು, ಜನರಿಗೆ ನೀಡಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳಿಗೆ ನೀರಿನ ಬಿಸಿ ತಟ್ಟಿಲ್ಲ.

ತಾಲ್ಲೂಕಿನಲ್ಲಿ 714 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 456.10 ಮಿ.ಮೀ. ಮಳೆಯಾಗಿದೆ. ಮುಂಗಾರು ಬೇಸಾಯದಲ್ಲಿ 22,370 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯಬೇಕಾಗಿತ್ತು. ನೀರಿನ ಕೊರತೆಯಿಂದಾಗಿ ಕೇವಲ 16,312 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಆ ಪೈಕಿ 8,179 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ನಾಶವಾಗಿದೆ.

ಹಿಂಗಾರು ಬೇಸಾಯದಲ್ಲಿ 4,475 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಬೇ ಕಾಗಿತ್ತು. 4,235 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ 3,885 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನಲ್ಲಿ ಅಂದಾಜು 1,945 ಎಕರೆ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ನೀರಿನ ಕೊರತೆಯಿಂದಾಗಿ 110 ಎಕರೆ ಪ್ರದೇಶದಲ್ಲಿನ ತೆಂಗುಬೆಳೆ ನಾಶವಾಗಿದೆ. ಗಿಡಗಳು ಒಣಗಿ ಹೋಗುತ್ತಿವೆ. ಅಂತ ರ್ಜಲ ಬತ್ತಿ ನೀರಿನ ಸಮಸ್ಯೆ ಎದುರಾಗಿ ರುವುದಿಂದ ಹೂವು ಬೆಳೆಯುವ ರೈತರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ.

ತೀವ್ರ ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜತೆಗೆ 100 ಟನ್‌ ಮೇವು ಸಂಗ್ರಹಿಸಲಾಗಿದೆ ಎಂದು ತಹಶೀಲ್ದಾರ್‌ ಡಿ. ಹನುಮಂತರಾಯಪ್ಪ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಅಂದಾಜು 42 ಸಾವಿರ ಜಾನುವಾರುಗಳಿವೆ. ಭತ್ತ ಸರಿಯಾಗಿ ಬೆಳೆಯದ್ದರಿಂದ ಮೇವಿನ ಸಮಸ್ಯೆ ಎದುರಾಗಿದೆ. ಹೈನುಗಾರಿಕೆಗೂ ಬರದ ಬಿಸಿ ತಟ್ಟಿದೆ.
-ಹಾರೋಹಳ್ಳಿ ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.