ADVERTISEMENT

ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಕೃಷಿ ಇಲಾಖೆಗೆ ಮುತ್ತಿಗೆ

ಮಳೆಯೂ ಇಲ್ಲದ ಕಾರಣ ಈಗಾಗಲೇ ಶೇ 50 ಭಾಗ ಬೆಳೆ ಒಣಗಿದೆ– ರೈತರ ಅಳಲು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 8:51 IST
Last Updated 28 ಸೆಪ್ಟೆಂಬರ್ 2016, 8:51 IST

ಶ್ರೀರಂಗಪಟ್ಟಣ: ನೀರಿಲ್ಲದೆ ಒಣಗುತ್ತಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಮಂಗಳವಾರ ಪಟ್ಟಣದಲ್ಲಿರುವ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

 ಸುಮಾರು ಒಂದೂವರೆ ತಾಸು ಕೃಷಿ ಇಲಾಖೆ ಕಚೇರಿಯ ಮುಖ್ಯ ದ್ವಾರವನ್ನು ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ, ಕೃಷಿ ಮತ್ತು ಜಲ ಸಂಪನ್ಮೂಲ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಕೃಷಿ ಇಲಾಖೆಯೇ ಭತ್ತದ ಬಿತ್ತನೆ ಬೀಜ ವಿತರಿಸಿ ನಾಟಿ ಮಾಡುವಂತೆ ಹೇಳಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಉದ್ದೇಶಕ್ಕೆ ನಾಲೆಗಳಿಗೆ ನೀರು ಕೊಡುವುದಾಗಿ ಹೇಳಿ ತಮಿಳುನಾಡಿಗೆ ನೀರು ಹರಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಭತ್ತ, ಕಬ್ಬು ಇತರ ಬೆಳೆಗಳು ಒಣಗುತ್ತಿದ್ದು, ಮಳೆಯೂ ಇಲ್ಲದ ಕಾರಣ ಈಗಾಗಲೇ ಶೇ 50 ಭಾಗ ಬೆಳೆ ಒಣಗಿದೆ. ಇನ್ನು ಒಂದು ವಾರ ಕಳೆದರೆ ಶೇ 80ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಲಿದೆ. ಹಾಗಾಗಿ ಸರ್ಕಾರ ತಕ್ಷಣ ಬೆಳೆ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದರು.

‘ಭತ್ತದ ಬೆಳೆಗೆ ಪ್ರತಿ ಎಕರೆಗೆ ₹ 50 ಸಾವಿರ, ಕಬ್ಬು ಬೆಳೆಗೆ ₹ 1 ಲಕ್ಷ, ಒಣಗಿರುವ ಪ್ರತಿ ತೆಂಗಿನ ಮರಕ್ಕೆ ₹ 10 ಸಾವಿರ ಪರಿಹಾರ ನೀಡಬೇಕು. ತರಕಾರಿ ಬೆಳೆಗಾರರಿಗೂ ನಷ್ಟ ಭರಿಸಬೇಕು. ಜಾನುವಾರುಗಳಿಗೆ ಮೇವು ಇಲ್ಲದೆ ಪಶುಪಾಲಕರು ಪರದಾಡುತ್ತಿದ್ದು, ಅಗತ್ಯ ಮೇವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ಮಂಜೇಶ್‌ಗೌಡ ಆಗ್ರಹಿಸಿದರು.

ಸಹಾಯಕ ಕೃಷಿ ನಿರ್ದೇಶಕ ಬಿ.ಎನ್‌. ಸೀತಾರಾಂ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಬಿ.ಎಂ. ಸುಬ್ರಹ್ಮಣ್ಯ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ. ಬಲರಾಂ, ನಾಗೇಂದ್ರಸ್ವಾಮಿ, ನಗುವನಹಳ್ಳಿ ಶಿವಸ್ವಾಮಿ, ಡಿ.ಎಂ. ರವಿ, ಕೆ.ಎನ್‌. ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ,  ರುಕ್ಮಾಂಗದ, ದೊಡ್ಡಪಾಳ್ಯಕರವೇ ಜಿಲ್ಲಾ ಉಪಾಧ್ಯಕ್ಷ ಸ್ವಾಮಿಗೌಡ, ಡಿ.ಬಿ. ರುಕ್ಮಾಂಗದ, ಕಸಾಪ ನಗರ ಘಟಕ ಅಧ್ಯಕ್ಷ ಕೆ.ಬಿ. ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.