ADVERTISEMENT

ಮಠಾಧೀಶರರು ಅಪ್‌ಡೇಟ್‌ ಆಗಬೇಕು

‘ಪರಿವರ್ತನಪರ ಧರ್ಮ ಸಂಸತ್‌’ ಕಾರ್ಯಕ್ರಮದಲ್ಲಿ ತ್ರಿನೇತ್ರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:53 IST
Last Updated 17 ಜುಲೈ 2017, 7:53 IST
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಭಾನುವಾರ ಸಂಜೆ ಆರಂಭವಾದ ಮೂರು ದಿನಗಳ ‘ಪರಿವರ್ತನಪರ ಧರ್ಮ ಸಂಸತ್‌’ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಭಾನುವಾರ ಸಂಜೆ ಆರಂಭವಾದ ಮೂರು ದಿನಗಳ ‘ಪರಿವರ್ತನಪರ ಧರ್ಮ ಸಂಸತ್‌’ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.   

ಶ್ರೀರಂಗಪಟ್ಟಣ: ‘ಸಾಮಾಜಿಕ ಸ್ಥಿತಿಗತಿಗಳು ಬದಲಾದಂತೆ ಮಠಾಧೀಶರು ಅಪ್‌ಡೇಟ್‌ ಆಗುತ್ತಿರಬೇಕು’ ಎಂದು ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಭಾನುವಾರ ಆರಂಭವಾದ ‘ಪರಿವರ್ತನಪರ ಧರ್ಮ ಸಂಸತ್‌’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮೀಜಿಗಳಲ್ಲಿ ಕೂಡ ನೋವು, ಕಷ್ಟಗಳಿವೆ. ಸಮಸ್ಯೆಯಲ್ಲಿ ಇರುವ ಸ್ವಾಮೀಜಿಗಳನ್ನು ನೋಡಿಕೊಳ್ಳುವವರೂ ಇಲ್ಲ. ತಾವು ಕಷ್ಟ ಎದುರಿಸಿದರೂ ಇತರರಿಗೆ ಅನ್ನ ಹಾಕಿ ಅಕ್ಷರ ಕಲಿಸುತ್ತಿದ್ದಾರೆ. ಶಾಲೆ, ಆಸ್ಪತ್ರೆ, ಅನಾಥಾಶ್ರಮ ಕಟ್ಟಿಸಿ ಸಮಾಜದ ಕೆಲಸ ಮಾಡಿದ್ದಾರೆ. ಆ ಮೂಲಕ ಸರ್ಕಾರದ ಮೇಲಿನ ಒತ್ತಡವನ್ನು ತಗ್ಗಿಸಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಅವರ ಬೆನ್ನಿಗಿದ್ದು ಧೈರ್ಯ ತುಂಬಿದ್ದಾರೆ; ತುಂಬುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ‘ಸಮಾಜದ ಲೋಪಗಳನ್ನು ಧಾರ್ಮಿಕ ಮುಖಂಡರು, ಮಠಾಧೀಶರು ಸರಿಪಡಿಸುತ್ತಾರೆ ಎಂಬ ವಿಶ್ವಾಸ ಬಹಳಷ್ಟು ಜನರಲ್ಲಿದೆ. ಅದು ನಮ್ಮಲ್ಲಿದೆಯೇ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಪರಿಸ್ಥಿತಿ ಬದಲಾದಂತೆ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ಬಸವಣ್ಣನವರ ಕಾಲದಿಂದಲೂ ಈ ಬದಲಾವಣೆ ನಡೆಯುತ್ತಲೇ ಇದೆ. ವಚನಗಳಲ್ಲಿ ಅವುಗಳನ್ನು ಹಿಡಿದಿಟ್ಟಿದ್ದಾರೆ. ಆದರೂ ನಿರೀಕ್ಷಿತ ಬದಲಾವಣೆ ಸಾಧ್ಯವಾಗುತ್ತಿಲ್ಲ. ಅದು ಸುಲಭ ಸಾಧ್ಯವೂ ಇಲ್ಲ’ ಎಂಬುದನ್ನು ಮನಗಾಣಬೇಕು ಎಂದರು.

(ಪರಿವರ್ತನಪರ ಧರ್ಮ ಸಂಸತ್‌ನಲ್ಲಿ ಭಾಗವಹಿಸಿದ್ದ ಸಂತರು, ಶರಣೆಯರು)

‘ಪಶ್ಚಿಮದ ದೇಶಗಳ ಜನರು ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ನಂಬಿಕೆ ಹೊಂದಿದ್ದಾರೆ. ಅದು ಹುಸಿಯಾಗದಂತೆ ನಡೆದುಕೊಳ್ಳ ಬೇಕಾದ ಹೊಣೆ ನಮ್ಮ ಮೇಲಿದೆ. ಜಗತ್ತಿನಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ ನೆಲೆಸಲು ಎಲ್ಲರೂ ನಂಬಿಕೆ, ವಿಶ್ವಾಸದಿಂದ ಶ್ರಮಿಸಬೇಕು. ಕೆಲವು ಸ್ವಾಮೀಜಿಗಳು ತಾವೇ ಸರ್ವಜ್ಞರು ಎಂಬ ಭಾವನೆ ಹೊಂದಿದ್ದಾರೆ. ಹಾಗೆ ಭಾವಿಸುವವರು ತಮ್ಮನ್ನು ತಾವು ಸಂಪೂರ್ಣವಾಗಿ ತೆರೆದುಕೊಳ್ಳಬೇಕು. ಮಠಾಧೀಶರು ವೈಚಾರಿಕ ಪ್ರಜ್ಞೆಯಿಂದ ಸಮಾಜವನ್ನು ಮುನ್ನಡೆಸಬೇಕು’ ಎಂದು ಅವರು ಸಲಹೆ ನೀಡಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ‘ಪಾರಮಾರ್ಥ ಪ್ರವೇಶ’ ಕುರಿತು ಮಾತನಾಡಿ, ಉತ್ತಮ ಸಂದೇಶ ಮತ್ತು ಉದ್ದೇಶದ ಜತೆ ನಾವು ಸಾಗಬೇಕು. ಔಚಿತ್ಯದ ಅರಿವು ಇರಬೇಕು. ಮಠಾಧೀಶರಿಗೆ ಮ್ಯಾಜಿಕ್‌ನ ಅಗತ್ಯವಿಲ್ಲ. ಬಸವ, ಅಕ್ಕಮಹಾದೇವಿ, ನುಲಿಯ ಚಂದಯ್ಯ, ಕನಕ, ಅಂಬೇಡ್ಕರ್‌, ಗಾಂಧೀಜಿ ಯಾವುದೇ ಮ್ಯಾಜಿಕ್‌ ಮಾಡಿಲ್ಲ. ಸ್ವಾಮೀಜಿಗಳಿಗೆ ಅದರ ಅವಶ್ಯಕತೆ ಇಲ್ಲ ಎಂದರು.

ಮಧುರೈನ ಪುರುಷೋತ್ತಮಾ ನಂದಪುರಿ ಸ್ವಾಮೀಜಿ, ತಿಪಟೂರಿನ ರುದ್ರಮುನಿ ಸ್ವಾಮೀಜಿ, ಕನಕಪುರದ ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು, ಶರಣೆಯರು ಭಾಗವಹಿಸಿದ್ದರು.

**

ಪುರ್ನಜನ್ಮದ ಬಗ್ಗೆ ತಲೆಕೆಡಿಸಿಕೊಳ್ಳದೆ ಈಗಿರುವ ಜನ್ಮದ ಬಗ್ಗೆ ಚಿಂತಿಸಬೇಕು. ಆತ್ಮೋದ್ಧಾರಕ್ಕೆ ಪ್ರಯತ್ನಿಸಬೇಕು
-ಡಾ.ಶಿವಮೂರ್ತಿ ಮುರುಘಾ ಶರಣರು, ಪೀಠಾಧ್ಯಕ್ಷರು, ಚಿತ್ರದುರ್ಗದಮುರುಘಾಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.