ADVERTISEMENT

ಮಡಿಕೇರಿ; 25ಕ್ಕೆ ಬೃಹತ್ ಸಮಾವೇಶ

ಕೊಡಗು ಜಿಲ್ಲೆಯ ಎಲ್ಲಾ ಭೂಮಿ, ವಸತಿ ರಹಿತರಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:16 IST
Last Updated 22 ಮಾರ್ಚ್ 2017, 10:16 IST

ಮಡಿಕೇರಿ: ದಿಡ್ಡಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಭೂಮಿ ಮತ್ತು ವಸತಿ ರಹಿತರಿಗೂ ನಿವೇಶನ ನೀಡಬೇಕೆಂದು ಒತ್ತಾಯಿಸಿ ಮಾರ್ಚ್ 25ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಡಿ.ಎಸ್‌. ನಿರ್ವಾಣಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ದಿಡ್ಡಳ್ಳಿ ಮಾತ್ರವಲ್ಲದೇ, ಪಾಲೆಮಾಡು, ಚೆರಿಯಪರಂಬು, ದೇವಪುರ, ಆರನೇ ಹೊಸಕೋಟೆ, ಕಣಿವೆರಾಂಪುರ, ಬಸವನಹಳ್ಳಿ... ಹೀಗೆ ಹತ್ತು ಹಲವು ಕಡೆಗಳಲ್ಲಿ ಆದಿವಾಸಿ, ದಲಿತರಿಗೆ ನಿವೇಶನಗಳನ್ನು ವಿತರಣೆ ಮಾಡುತ್ತಿಲ್ಲ.

ತಲೆಯ ಮೇಲೊಂದು ಸೂರು ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಅರ್ಜಿ ಹಾಕಿ ವರ್ಷಗಟ್ಟಲೇ ಕಾದರೂ, ಸರ್ಕಾರ ಕಿಂಚ್ಚಿತ್ತು ಗಮನ ಹರಿಸುತ್ತಿಲ್ಲ ಎಂದು ದೂರಿದರು.

ದಿಡ್ಡಳ್ಳಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳಿದ್ದು, ಇವರಲ್ಲಿ ಹೆಚ್ಚಿನವರು ಆದಿವಾಸಿಗಳು, ಸ್ವಂತ ಮನೆ ಇಲ್ಲದೇ ಕೊರೆವ ಬಿಸಿಲು, ಚಳಿ, ಮಳೆಗೆ ಸಣ್ಣ ಗುಡಿಸಲು ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲವರು ಕಾಫಿ ಮಾಲೀಕರ ತೋಟಗಳಲ್ಲಿ ಲೈನ್ ಮನೆಗಳನ್ನು ನಿರ್ಮಿಸಿ ಜೀತದಾಳಾಗಿದ್ದಾರೆ. ಈ ಹಿಂದೆ  ಸರ್ಕಾರ ಮನೆ ಕೊಡಿಸುತ್ತೇವೆ ಎಂದು ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಆರೋಪಿಸಿದರು.

ಪಾಲೇಮಾಡು ಪೈಸಾರಿ ಭೂಮಿಯಲ್ಲಿ ದಲಿತರು ಮತ್ತು ಇತರ ದಮನಿತ ಸಮುದಾಯಗಳು, ಅಲ್ಪಸಂಖ್ಯಾತರು ಸೇರಿದಂತೆ 260 ಕುಟುಂಬಗಳು ಹತ್ತು ವರ್ಷಗಳಿಂದ ವಾಸ ಮಾಡುತ್ತಾ ಬಂದಿದ್ದಾರೆ. ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ, ಹಕ್ಕು ಪತ್ರಗಳು ಇದುವರೆಗೂ ಜಿಲ್ಲಾಡಳಿತ ವಿತರಣೆ ಮಾಡುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಾದ ಅಮೀನ್ ಮೊಹಿಸಿನ್, ಅಪ್ಪಾಜಿ, ಅಬ್ದುಲ್ ಅಡ್ಕಾರ್, ಎಸ್.ಆರ್. ಮಂಜುನಾಥ್ ಹಾಜರಿದ್ದರು.

ಸಮಾವೇಶಕ್ಕೆ ವಿವಿಧ ಸಂಘಟನೆಗಳ ನೇತೃತ್ವ
ಮಡಿಕೇರಿ:
ರಾಜ್ಯ ರೈತ ಸಂಘ, ಎಸ್‌ಡಿಪಿಐ, ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಬಹುಜನ ಕಾರ್ಮಿಕ ಸಂಘ, ಬಿಎಸ್‌ಪಿ, ಬಿವಿಎಸ್‌, ಟಿಯುಐಸಿ, ಆರ್‌ವೈಎಫ್‌ಐ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಒಕ್ಕೂಟ, ಆದಿವಾಸಿ ನಿಮೋಚನ ಸಂಘ ಭಾಗವಹಿಸಲಿವೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಸಸಂಸ–ಭೀಮವಾದ, ದಸಂಸ ಕೃಷ್ಣಪ್ಪ ಸ್ಥಾಪಿತ, ದಸಂಸ ಸಂಯೋಜಕ, ಕೊಡಗು ಸೌಹಾರ್ದ ವೇದಿಕೆ, ಆದಿವಾಸಿ ಸಮನ್ವಯ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಶ್ರಮಿಕ ಶಕ್ತಿ, ಮಹಿಳಾ ಮುನ್ನಡೆ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ, ತಲೆಹೊರೆ ಕಾರ್ಮಿಕರ ಸಂಘ, ಕೊಡಗು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿಗಳು ಭಾಗವಹಿಸಲಿವೆ ಎಂದು ಮುಖಂಡರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.