ADVERTISEMENT

ಮನ್‌ಮುಲ್‌: ದಾಖಲೆ ಹಾಲು ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:32 IST
Last Updated 8 ಸೆಪ್ಟೆಂಬರ್ 2017, 7:32 IST

ಮಂಡ್ಯ: ಗ್ರಾಹಕರು ಹಾಗೂ ಹಾಲು ಉತ್ಪಾದಕ ನಡುವೆ ಸೇತುವೆಯಂತಿರುವ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮನ್‌ಮುಲ್‌) ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹಿಸುವ ಒಕ್ಕೂಟವಾಗಿ ಹೊರಹೊಮ್ಮಿದ್ದು, ಜಿಲ್ಲೆಯ ರೈತರ ಬಾಳಿನ ಆಶಾಕಿರಣವಾಗಿದೆ.

ಮೂರು ವರ್ಷಗಳಿಂದ ಜಿಲ್ಲೆಯನ್ನು ಬರಗಾಲ ಕಾಡುತ್ತಿದ್ದಾಗ ರೈತರನ್ನು ಕಾಪಾಡಿದ್ದು ಇದೇ ಮನ್‌ಮುಲ್. ಸಾಂಪ್ರದಾಯಿಕ ಬೆಳೆಗಳಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಜೊತೆಗೆ ಯುವ ರೈತರು ನಗರಗಳಿಗೆ ಗುಳೇ ಹೋಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಜಿಲ್ಲೆಯ ರೈತರಿಗೆ ಹೈನೋದ್ಯಮದ ಸ್ಪಷ್ಟ ಚಿತ್ರಣ ಕೊಟ್ಟ ಮನಮುಲ್‌ ಸ್ವಯಂ ಉದ್ಯೋಗದ ಹೊಸ ಕ್ಷತಿಜವನ್ನೇ ಸೃಷ್ಟಿ ಮಾಡಿ ಕೊಟ್ಟಿತು.

ಹಲವು ಪ್ರಥಮ ಸಾಧನೆಗಳೊಂದಿಗೆ ಮುನ್ನಡೆಯುತ್ತಿರುವ ಮನ್‌ಮುಲ್‌ ಶುದ್ಧ ಹಾಲು ಉತ್ಪಾದನೆಯಲ್ಲಿ ‘ಕ್ವಾಲಿಟಿ ಮಾರ್ಕ್‌’ ಪ್ರಶಸ್ತಿ ಪಡೆದು ಇಡೀ ದೇಶಕ್ಕೆ ಜಿಲ್ಲೆಯ ಹೈನೋದ್ಯಮದ ಮಹತ್ವ ಸಾರಿತು.

ADVERTISEMENT

ಮೈಸೂರು ಮತ್ತು ತುಮಕೂರು ಹಾಲು ಒಕ್ಕೂಟಗಳಿಂದ ವಿಭಜನೆಗೊಂಡು ಮಾ. 23, 1987ರಲ್ಲಿ ಮದ್ದೂರು ತಾಲ್ಲೂಕು, ಗೆಜ್ಜಲಗೆರೆ ಕೈಗಾರಿಕಾ ನಗರದಲ್ಲಿ ಅಸ್ಥಿತ್ವಕ್ಕೆ ಬಂದ ಒಕ್ಕೂಟವು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳ ಗ್ರಾಹಕರ ಪ್ರೀತಿಯಿಂದ ಸಾವಿರಾರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಶಕ್ತಿ ತುಂಬಿದೆ. ‘ನಂದಿನಿ‌’ ಬ್ರಾಂಡ್‌ ಮೂಲಕ ಗ್ರಾಹಕರ ಮನಸ್ಸು ಮುಟ್ಟಿರುವ ಉತ್ಪನ್ನಗಳು ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ತನ್ನ ಛಾಪು ಮೂಡಿಸಿದೆ.

ನಿತ್ಯ 8.27 ಲಕ್ಷ ಕೆ.ಜಿ. ಹಾಲು ಶೇಖರಣೆ: ಒಕ್ಕೂಟವು ಪ್ರತಿದಿನ 4.25 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯದ ಮುಖ್ಯ ಡೇರಿ ಹೊಂದಿದೆ. ಕೆ.ಆರ್.ಪೇಟೆಯಲ್ಲಿ ಒಂದು ಲಕ್ಷ ಲೀಟರ್ ಮತ್ತು ನಾಗಮಂಗಲದಲ್ಲಿ 60 ಸಾವಿರ ಲೀಟರ್ ಸಾಮರ್ಥ್ಯದ ಶೀತಲೀಕರಣ ಕೇಂದ್ರ, ಕುಂಬಳಗೋಡಿನಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಯುಎಚ್‌ಟಿ ಘಟಕ, 51 ಹಾಲು ಶೇಖರಣಾ ಮಾರ್ಗಗಳ ಮೂಲಕ ಸರಾಸರಿ 5 ಲಕ್ಷ ಕೆ.ಜಿ ಹಾಲು ಸಂಗ್ರಹಣೆ ಹಾಗೂ 120 ಬಿ.ಎಂ.ಸಿ. ಕೇಂದ್ರಗಳ ಮೂಲಕ ನಿತ್ಯ 3.27 ಲಕ್ಷ ಕೆ.ಜಿ ಸೇರಿ ಒಟ್ಟು ಪ್ರತಿದಿನ 8.27 ಲಕ್ಷ ಕೆ.ಜಿ ಹಾಲನ್ನು ಶೇಖರಿಸಲಾಗುತ್ತಿದೆ.

ಒಕ್ಕೂಟವು ಸದಸ್ಯ ಸಂಘಗಳಿಂದ ₹ 13 ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, 2016-17ನೇ ಸಾಲಿನಲ್ಲಿ ₹ 4.01 ಕೋಟಿ ನಿವ್ವಳ ಲಾಭ ಗಳಿಸಿದೆ.
1192 ಸಂಘಗಳು: 2017-18ನೇ ಸಾಲಿನಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ 1192 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಇವೆ. ಅವುಗಳ ಪೈಕಿ 523 ಮಹಿಳಾ ಸಂಘಗಳಿವೆ. ಪ್ರಸ್ತುತ ಸಾಲಿನಲ್ಲಿ 96,916 ಸಕ್ರಿಯ ಸದಸ್ಯರು ಹಾಲು ಪೂರೈಸುತ್ತಾರೆ.

ಪ್ರತಿ ಹತ್ತು ದಿನಗಳಿಗೊಮ್ಮೆ ₹ 19 ಕೋಟಿ ಹಣವನ್ನು ಉತ್ಪಾದಕರಿಗೆ ಬ್ಯಾಂಕ್ ಮೂಲಕ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಮಹಿಳಾ ಸದಸ್ಯರಿಗೆ ಆರೋಗ್ಯ, ಶಿಕ್ಷಣ ಸಾಕ್ಷರತೆ, ಕಾನೂನು ಅರಿವು, ತಾರತಮ್ಯ ನಿವಾರಣೆ, ಹೈನುಗಾರಿಕೆ ಶಿಕ್ಷಣ, ಸ್ವಸಹಾಯ ಗುಂಪುಗಳ ಸ್ಥಾಪನೆ ಹಾಗೂ ವಿವಿಧ ಆದಾಯ ಬರುವಂತಹ ತರಬೇತಿಗಳನ್ನು ನೀಡಲಾಗುತ್ತಿದೆ.

ಸರ್ಕಾರದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದ್ದು 2016-17ನೇ ಸಾಲಿನ ಅಂತ್ಯಕ್ಕೆ 1,18,543 ಸದಸ್ಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಾರಕ್ಕೆ ಮೂರು ದಿನದಂತೆ 2016-17ನೇ ಸಾಲಿನಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಒಟ್ಟು 225.63 ಟನ್ ಹಾಲಿನ ಪುಡಿಯನ್ನು ಒಟ್ಟು 12,63,314 ಪಲಾನುಭವಿಗಳಿಗೆ ವಿತರಿಸಲಾಗಿದೆ. 2016-17ನೇ ಸಾಲಿನಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಒಟ್ಟು 199 ಟನ್ ಹಾಲಿನ ಪುಡಿಯನ್ನು 2546 ಅಂಗನವಾಡಿ ಕ್ರೇಂದ್ರಗಳಿಗೆ ವಿತರಿಸಲಾಗಿರುತ್ತದೆ. ಕ್ಷೀರಭಾಗ್ಯ ಯೋಜನೆಯಡಿ 2013-14 ರಿಂದ 2016-17ರ ವರೆಗೆ ₹ 292.44 ಕೋಟಿ ಮೊತ್ತದ 1714.06 ಮೆಟ್ರಿಕ್ ಟನ್ ಹಾಲಿನ ಪುಡಿ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.