ADVERTISEMENT

ಮರಗಳ ಮಾರಣಹೋಮ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:02 IST
Last Updated 15 ಸೆಪ್ಟೆಂಬರ್ 2017, 9:02 IST
ಮಂಡ್ಯದ ಮೈಷುಗರ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮರ ಕಡಿದಿರುವುದು
ಮಂಡ್ಯದ ಮೈಷುಗರ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮರ ಕಡಿದಿರುವುದು   

ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಗರದ ಮೈಷುಗರ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮರ ಕಡಿದಿದ್ದಾರೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

‘ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರೌಢಶಾಲೆ ಮತ್ತು ಪದವಪೂರ್ವ ಕಾಲೇಜಿನ ಆವರಣದಲ್ಲಿದ್ದ 25ಕ್ಕೂ ಹೆಚ್ಚು ಮರ ಕಡಿಯಲಾಗಿದೆ. ಈ ಮರಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂಬ ಕಾರಣದಿಂದ ಕಡಿಯಲಾಗಿದೆ. ಈ ಬಗ್ಗೆ ಮೊದಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಕಾಲೇಜಿಗೆ ತೆರಳುವ ಸ್ಥಳದಲ್ಲಿ ಎರಡೂ ಕಡೆ ಕೋಟೆಯಂತೆ ಬೆಳೆದಿದ್ದ ಅಮೂಲ್ಯ ಮರಗಳನ್ನು ಕಡಿದು ಹಾಕಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ದೂರಿದರು.

‘ಮರ ಕಡಿಯುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ತೋಟಗಾರಿಕೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಮರಗಳನ್ನು ಉಳಿಸಿಕೊಂಡು ತೋಟಗಾರಿಕೆ ಮಾಡಬಹುದಿತ್ತು. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಡಿದಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಯೋಗಣ್ಣ, ಉಪಾಧ್ಯಕ್ಷ ಗೌತಮ್‌ ಸಿಂಗ್‌, ಸಂಘಟನಾ ಕಾರ್ಯದರ್ಶಿ ರವೀಂದ್ರ, ಬೋರೇಗೌಡ, ಎಂ.ನವೀನ್‌, ದುಬೇರುಲ್ಲಾ ಷರೀಪ್‌, ಸಿದ್ದು, ಚಂದ್ರು, ಅರುಣ್ ಇದ್ದರು.

ಅಪಾಯ ತಡೆಯಲು ಕ್ರಮ: ‘ಕಾಲೇಜು ಆವರಣದಲ್ಲಿದ್ದ ಮರಗಳನ್ನು ಪೂರ್ತಿಯಾಗಿ ಕಡಿದಿಲ್ಲ, ಕೊಂಬೆಗಳನ್ನಷ್ಟೇ ಸವರಲಾಗಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಸಂಸ್ಥೆಯ ಸಿಬ್ಬಂದಿ ತಿಳಿಸಿದರು.

‘ಸಂಸ್ಥೆಯ ಆವರಣದಲ್ಲಿ 400 ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ನಾವು ಮರ ಕಡಿಯುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಕಾಂಪೌಂಡ್‌ ಪಕ್ಕದಲ್ಲಿದ್ದ ಮರಗಳ ಕೊಂಬೆ ಮುರಿದು ಬಿದ್ದು ಹೋಗಿತ್ತು. ಅಲ್ಲದೇ ಪಕ್ಕದಲ್ಲೇ ಇದ್ದ ವಿದ್ಯುತ್‌ ತಂತಿಗೆ ತಗುಲಿ ಅಪಾಯವಾಗುವ ಸಂಭವ ಇತ್ತು. ಇದನ್ನು ತಡೆಯುವುದಕ್ಕಾಗಿ ಕೊಂಬೆಗಳನ್ನಷ್ಟೇ ಸವರಿದ್ದೇವೆ’ ಎಂದು ಆಡಳಿತ ಮಂಡಳಿ ಕಾರ್ಯದರ್ಶಿ ಸತ್ಯನಾರಾಯಣ ದೇವ್‌ ತಿಳಿಸಿದರು.

ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಎನ್‌.ಭಾಗ್ಯಲಕ್ಷಿ ಮಾತನಾಡಿ, ‘ಕಾಲೇಜು ಆವರಣ ಮರಗಳಿಂದ ಮುಚ್ಚಿ ಹೋಗಿದ್ದ ಕಾರಣ ಇಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದವು. ರಾತ್ರಿ ವೇಳೆ ಕುಡಿದು ಬಾಟಲ್‌ ಗಳನ್ನು ಆವರಣದಲ್ಲೇ ಬಿಸಾಡಿ ಹೋಗುತ್ತಿದ್ದರು. ಅಲ್ಲದೇ ಇಲ್ಲಿ ಮರೆಯಾಗಿರುವ ಕಾರಣ ಹೆದ್ದಾರಿಯಲ್ಲಿ ಸಂಚರಿಸುವ ಜನರು ವಾಹನ ನಿಲ್ಲಿಸಿ ಇಲ್ಲಿ ಶೌಚ ಮಾಡಿ ಹೋಗುತ್ತಿದ್ದರು. ಇದನ್ನೆಲ್ಲ ತಡೆಯಲು ಮರಗಳನ್ನು ಸವರಲಾಗಿದೆ. ತೋಟ ನಿರ್ಮಿಸಲು ಆವರಣ ಸ್ವಚ್ಛ ಮಾಡಿದ್ದೇವೆ.

ಮರಗಳನ್ನು ಸವರಿರುವ ಕಾರಣ ಅವು ಮತ್ತೆ ಬೆಳೆಯುತ್ತವೆ. ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ. ಅದಕ್ಕಾಗಿ ಬಿಇಒ, ಡಿಡಿಪಿಐ ಅವರ ಅಭಿಪ್ರಾಯ ಪಡೆದಿದ್ದೇವೆ’ ಎಂದು ಹೇಳಿದರು.

‘ಅರಣ್ಯ ಇಲಾಖೆಯಿಂದ ಇಲ್ಲಿ ನೂರಾರು ಮರ ಬೆಳೆಸಿದ್ದೇವೆ. ಕಡಿಯುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಈ ಜಾಗ ಅನೈತಿಕ ಚಟುವಟಿಕೆ ನಡೆಸುವವರ ತಾಣವಾಗಬಾರದು ಎಂಬ ಉದ್ದೇಶದಿಂದ ಕೊಂಬೆಗಳನ್ನು ಕಡಿಸಿದ್ದೇವೆ. ತಪ್ಪು ತಿಳಿದುಕೊಂಡ ಕೆಲವರು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಶಾಲೆಯ ಆವರಣದಲ್ಲಿ ಹಲವು ಬಾರಿ ಹಾವುಗಳನ್ನು ಕಂಡಿದ್ದೇವೆ. ಸ್ವಚ್ಛತೆ ಕೊರತೆಯಾಗಿರುವ ಕಾರಣ ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಸ್ವಚ್ಛ ಮಾಡಿ ತೋಟ ನಿರ್ಮಾಣ ಮಾಡಲಾಗುತ್ತಿದೆ, ಮರ ಕಡಿದಿಲ್ಲ’ ಎಂದು ಕನ್ನಡ ಶಿಕ್ಷಕಿ ಟಿ.ಎಚ್‌.ವಿಶಾಲಾಕ್ಷಿ ಹೇಳಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.