ADVERTISEMENT

ಮರಳು ನೀತಿ ರೂಪಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 7:24 IST
Last Updated 12 ಜುಲೈ 2017, 7:24 IST

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನೂರಾರು ಎಕರೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮಕೈಗೊಳ್ಳುವುದಿಲ್ಲ. ಆದರೆ, ಎತ್ತಿನಗಾಡಿಯಲ್ಲಿ ತಮ್ಮ ಮನೆಗೆಲಸಗಳಿಗೆ ಮರಳು ಸಾಗಣೆ ಮಾಡುವ ರೈತರಿಗೆ ದಂಡ ವಿಧಿಸಿ ಕ್ರಮವಹಿಸುತ್ತೀರಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಜನಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿ ವ್ಯಕ್ತಿಗಳಿಗೊಂದು ನ್ಯಾಯವೇ  ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಶ್‌ ಅವರನ್ನು ಪ್ರಶ್ನಿಸಿದರು.

ಮನೆಗೆಲಸಗಳಿಗೆ ಎತ್ತಿನಗಾಡಿಯಲ್ಲಿ ಮರಳು ಸಾಗಣೆ ಮಾಡಿಕೊಳ್ಳುವ ಸಾಮಾನ್ಯ ಜನರಿಗೆ ₹ 200 ರಾಜಧನ ವಿಧಿಸಬೇಕು. ಮರಳು ಸಾಗಣೆಗೆ ಅನುಮತಿ ನೀಡಬೇಕೆಂದು ತಾಲ್ಲೂಕು ಆಡಳಿತ ತೀರ್ಮಾನಿಸಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ ಏಕೆ ಎಂದು ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಅವರನ್ನು ಕೂಡ ಶಾಸಕ ಪುಟ್ಟಣ್ಣಯ್ಯ ತರಾಟೆಗೆ ತೆಗೆದುಕೊಂಡರು.

ADVERTISEMENT

ಮಳೆ, ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಎತ್ತಿನಗಾಡಿ ಹೊಂದಿರುವ ರೈತರು ಬಾಡಿಗೆಯಿಂದ ದುಡಿದು ಜೀವನ ಸಾಗಿಸಬೇಕಾಗಿದೆ. ಮನೆ ಕಟ್ಟಿಕೊಳ್ಳುವ ಜನಸಾಮಾನ್ಯರಿಗೆ, ಆಶ್ರಯ ಮನೆ ಕಟ್ಟಿಕೊಳ್ಳುವ ಬಡವರಿಗೆ ಕನಿಷ್ಠ ಮಟ್ಟದ ಮರಳು ಅವಶ್ಯ. 

ರೈತರಿಗೆ ಎತ್ತಿನಗಾಡಿಯಲ್ಲಿ ಮರಳು ಸಾಗಣೆಗೆ ರಾಜಧನ ಪಾವತಿಸಿ ಅನುಮತಿ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಈ ತೀರ್ಮಾನ ಇನ್ನೂ ಜಾರಿಗೊಂಡಿಲ್ಲವೆಂದರೆ ಆಡಳಿತ ನಿಷ್ಕ್ರಿಯವಾಗಿದೆ ಎಂದರ್ಥವಲ್ಲವೇ? ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ.

ಪೊಲೀಸ್ ಇಲಾಖೆ ಒಟ್ಟಾಗಿ ಮರಳು ನೀತಿಯನ್ನು ಜಾರಿಗೊಳಿಸಬೇಕು. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ಪುಟ್ಟಣ್ಣಯ್ಯ ಖಡಕ್‌ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.