ADVERTISEMENT

ಮಳೆ: ಮಾರುಕಟ್ಟೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 5:58 IST
Last Updated 2 ಅಕ್ಟೋಬರ್ 2014, 5:58 IST

ಹಲಗೂರು: ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಮಳೆ ಬಿದ್ದಾಗ ಜನರು ಪರಿತಪಿಸುತ್ತಿದ್ದಾರೆ. ಮಳೆ ನೀರು ರಸ್ತೆಯಲ್ಲಿಯೇ ನದಿ ರೂಪ ತಾಳಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಾರುಕಟ್ಟೆಗೆ ನೀರು ನುಗ್ಗಿ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಶಾಲಾ, ಕಾಲೇಜು ಆವರಣಗಳು ಕೆಸರು ಗದ್ದೆಗಳಾಗಿವೆ. ಮಳೆ ಬಂದರೆ ಇಲ್ಲಿನ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.

ಇತ್ತೀಚೆಗೆ ನಿತ್ಯ ಹಲಗೂರಿಗೆ ಮಳೆಯಾಗುತ್ತಿದೆ. ಮಂಗಳವಾರ ಬಿದ್ದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಪಟ್ಟಣ ಪಂಚಾಯಿತಿ ಹೊಸ್ತಿಲಲ್ಲಿ ನಿಂತಿರುವ ಹಲಗೂರಿಗೆ ಕನಿಷ್ಠ ಚರಂಡಿ ವ್ಯವಸ್ಥೆಯು ಸಮರ್ಪಕವಾಗಿಲ್ಲ. ಚನ್ನಪಟ್ಟಣ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥಿತ ಚರಂಡಿ ಇಲ್ಲ. ರಸ್ತೆಗಳಿಗೆ ಆವರಿಸಿದ ಅಂಗಡಿ ತೆರವುಗೊಳಿಸಿದ ವೇಳೆಯಲ್ಲಿ ಚರಂಡಿಗಳು ಮುಚ್ಚಿಹೋಗಿವೆ. ವ್ಯಾಪಾರಸ್ಥರು ಅಂಗಡಿ  ಮುಂಭಾಗ ಮಣ್ಣು ಸುರಿದು ಎತ್ತರಿಸಿಕೊಂಡಿದ್ದಾರೆ. ಇವುಗಳ ಪರಿಣಾಮ ಮಳೆ ಬಿದ್ದಾಗ ನೀರು ರಸ್ತೆಗೆ ಹರಿಯುತ್ತಿದೆ.

ರಸ್ತೆ ಕೊರೆತ ಹೆಚ್ಚಾಗಿ ಅಲ್ಲಲ್ಲಿ ಗುಂಡಿ ಬಿದ್ದಿವೆ. ಇದರಿಂದಾಗಿ  ವಾಹನ ಸವಾರರು ಚಲಿಸಲು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಹರಿದ ನೀರು ಮಾರುಕಟ್ಟೆಗೆ ನುಗ್ಗಿ, ತರಕಾರಿ, ಹೂ–ಹಣ್ಣು ಮಾರಾಟಗಾರರಿಗೆ ನಷ್ಟ ಸಂಭವಿಸಿದೆ. ಉನ್ನತೀಕರಿಸಿದ ಸರ್ಕಾರಿ ಬಾಲಕಿಯರ ಪಾಠಶಾಲೆ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್‌, ದೂರಸಂಪರ್ಕ ಕೆಂದ್ರ, ಸರ್ಕಾರಿ ನೌಕರರ ವಸತಿಗೃಹಗಳ ಆವರಣಗಳು ಕೆಸರು ಮಯವಾಗಿವೆ. ಇದರಿಂದಾಗಿ ವಿದ್ಯಾರ್ಥಿಗಳ ಆಟ ಪಾಠಕ್ಕೂ ತೊಂದರೆ ಉಂಟಾಗಿದೆ.

ಕನಕಪುರ ಮುಖ್ಯರಸ್ತೆಯ ಚರಂಡಿಗಳು ಹೂಳು ತುಂಬಿಕೊಂಡಿವೆ. ಅಲ್ಲಲ್ಲಿ ಮಧ್ಯ ಭಾಗದಲ್ಲಿ ಹೂಳು ತೆಗೆದಿದ್ದರೂ, ತ್ಯಾಜ್ಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವುದಿಲ್ಲ. ಹೋಟೆಲ್‌, ಅಂಗಡಿಗಳ ತ್ಯಾಜ್ಯವೂ ಸೇರಿ ಗಬ್ಬು ವಾಸನೆ ಬೀರುತ್ತಿವೆ.

ಮಳವಳ್ಳಿ ಮುಖ್ಯರಸ್ತೆಯ ಚರಂಡಿಗಳು ಮುಚ್ಚಿವೆ. ತುಂಡು ಬಿದಿಯ ಮನೆ ಬಾಗಿಲಿನವರೆಗೆ ನೀರು ಹರಿದು ದುರ್ನಾತ ಬೀರುತ್ತಿದೆ. ಮುತ್ತತ್ತಿ ಸರ್ಕಲ್‌ನ ಕೆಲವು ಅಂಗಡಿಗಳಿಗೆ ನೀರು ನುಗ್ಗಿದೆ.

‘ಹಲಗೂರು ಸುವರ್ಣ ಗ್ರಾಮ ಯೋಜನೆಗೆ ಸೇರಿದ್ದು, ಕಾರ್ಯರೂಪಕ್ಕೆ ತರುವ ಕೆಲಸ ಆಗಿಲ್ಲ. ರಸ್ತೆ, ಚರಂಡಿ ಸುಧಾರಿಸಲು ಪ್ರಯತ್ನಿಸಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗುತ್ತಿಗೆದಾರರ ಕುಂಟು ನೆಪ ಒಡ್ಡಿ ಯೋಜನೆ ಜಾರಿಗೆ ತುಂಬಾ ವಿಳಂಬ ಮಾಡುತ್ತಿದ್ದಾರೆ’ ಎಂದು ಯುವಮುಖಂಡ ಶ್ರೀನಿವಾಸಮೂರ್ತಿ ಮತ್ತು ಗ್ರಾಮಸ್ಥರು ಆರೋಪಿಸುತ್ತಾರೆ.

ಮನೆ ಮೇಲೆ ಬಿದ್ದ ಮರ 
ನಾಗಮಂಗಲ: ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ಸುರಿದ ಗಾಳಿಮಳೆಗೆ ಬೃಹತ್‌ ಮರವೊಂದು ಮನೆ ಮೇಲೆ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಗ್ರಾಮದ ನಿವಾಸಿ ಡಿ.ಬಿ. ನಾಗೇಂದ್ರ ಮತ್ತು ಪಟ್ಟಾಭಿರಾಮಶೆಟ್ಟಿಗೆ ಸೇರಿದ 2 ಮನೆಗಳಿಗೆ ಹಾನಿಯಾಗಿವೆ.
ಘಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿಗೌಡ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.