ADVERTISEMENT

ಮಹಿಳೆಯನ್ನು ದುಡಿಯುವ ಯಂತ್ರದಂತೆ ಕಾಣದಿರಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:39 IST
Last Updated 14 ಮಾರ್ಚ್ 2017, 6:39 IST
ಮಂಡ್ಯದಲ್ಲಿ ಸೋಮವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಉದ್ಘಾಟಿಸಿದರು
ಮಂಡ್ಯದಲ್ಲಿ ಸೋಮವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಉದ್ಘಾಟಿಸಿದರು   

ಮಂಡ್ಯ: ಮಹಿಳೆಯನ್ನು ದುಡಿಯುವ ಯಂತ್ರದಂತೆ ಕಾಣಲಾಗುತ್ತಿದ್ದು, ಪುರುಷ ಸಮಾಜ ವ್ಯವಸ್ಥೆಯಲ್ಲಿ ಗೌರವ ಕೊಡದೇ ನಡೆಸಿಕೊಳ್ಳುತ್ತಿರುವುದು ದುರಂತ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ವಿಷಾದ ವ್ಯಕ್ತಪಡಿಸಿದರು.

ನಗರದ ರೈತ ಸಭಾಂಗಣದಲ್ಲಿ ಆರ್ಗನೈಜೇಷನ್‌ ಫಾರ್‌ ದಿ ಡೆವಲಪ್‌ಮೆಂಟ್‌ ಆಫ್‌ ಪೀಪಲ್‌ ಹಾಗೂ ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದ ವತಿಯಿಂದ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯ ಸಂಪತ್ತಿಗೆ ಹೆಣ್ಣಿನ ನಾನಾ ಹೆಸರುಗಳಿಂದ ಕರೆಯುತ್ತಾ, ಪೂಜ್ಯ ಭಾವನೆಯಿಂದ ನೋಡುತ್ತೇವೆ. ಆದರೆ, ಅವರಿಗೆ ಸಮಾಜದಲ್ಲಿ ಸಂಪೂರ್ಣ ಹಕ್ಕುಗಳು ಸಿಕ್ಕಿಲ್ಲ. ಮಹಿಳೆಯು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾಳೆ ಎಂದು ಎಂದರು.

ADVERTISEMENT

ಕೃಷಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ದೇಶಕ್ಕೆ ಅನ್ನ ಕೊಡುವ ಕೊಡುಗೈ ದಾನಿ ಆಗಿದ್ದಾಳೆ. ಅಂತಹ ಹೆಣ್ಣಿನ ಮೇಲೆ ಅತ್ಯಾಚಾರ, ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ದೌರ್ಜನ್ಯದಂತಹ ಪ್ರಕರಣಗಳು ನಿಲ್ಲಬೇಕು. ಹೆಣ್ಣನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಸಹಾಯ ಸಂಘ ಹಾಗೂ ಖಾಸಗಿ ಬ್ಯಾಂಕ್‌ನವರು ಸಾಲದ ನೀಡುವಾಗ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಬಲಿಪಶು ಮಾಡುತ್ತಿದ್ದಾರೆ. ಬಡ್ಡಿ ಹೆಚ್ಚಾಗಿ ಅವರ ಆರ್ಥಿಕ ಪರಿಸ್ಥಿತಿ ಕುಗ್ಗುತ್ತಿದೆ. ಇದರಿಂದ ಅವರನ್ನು ಪಾರು ಮಾಡಲು ಸಹಕಾರ ಹಾಗೂ ಸರ್ಕಾರಿ ಬ್ಯಾಂಕಿನವರು ಸಾಲ ನೀಡಬೇಕು ಎಂದು ಮನವಿ ಮಾಡಿದರು.

ವಿಜಯ ಆರ್ಥಿಕ ಸಾಕ್ಷರತೆ ಕೇಂದ್ರದ ಮುಖ್ಯಸ್ಥ ಸುರೇಶ್‌ ಆಚಾರ್‌ ಮಾತನಾಡಿ, ಗ್ರಾಮ ಹಾಗೂ ಪಟ್ಟಣಗಳಲ್ಲಿ ಬಹುತೇಕ ಮಹಿಳೆಯರೇ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬ್ಯಾಂಕಿನಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು. ಖಾಸಗಿ ಕಂಪೆನಿಗಳ ಸಾಲಕ್ಕೆ ಮಾರು ಹೊಗಬೇಡಿ ಎಂದರು.

ಒಡಿಪಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಡಿ. ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಜಿ. ಪ್ರಭುದೇವನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್‌.ದಿವಾಕರ್‌, ಒಡಿಪಿ ಸಂಸ್ಥೆ ಉಪ ನಿರ್ದೇಶಕ ಅಲೆಕ್ಸ್‌ ಪ್ರಶಾಂತ್‌ ಸಿಕ್ವೇರ, ಮುಖಂಡರಾದ ಕೆ.ಜಯಮ್ಮ, ಭಾರತಿ, ತುಳಸೀಧರ್‌, ಸುರೇಶ್‌, ಸುಮತಿ, ರತ್ನಮ್ಮ, ಮೇರಿ ಸ್ಟೆಲ್ಲಾ ಇದ್ದರು.

**

ಹೆಣ್ಣುಮಕ್ಕಳು ಶಿಕ್ಷಣವಂತರಾಗಬೇಕು. ರಕ್ಷಣೆಗೆ ಇರುವ ಹಕ್ಕುಗಳ ಬಗ್ಗೆ ತಿಳಿದುಕೊಂಡು ಬದಲಾವಣೆ ಹೊಂದಬೇಕು
-ಎಸ್‌. ದಿವಾಕರ್‌, 
ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.