ADVERTISEMENT

ಮಹಿಳೆಯರಿಗೆ ಪೂರ್ಣ ಹಕ್ಕು ಸಿಗಲಿ

ಮಂಡ್ಯ: ರಾಜ್ಯಮಟ್ಟದ ಬಾಲಕಿಯರ ನಾಯಕತ್ವ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:34 IST
Last Updated 5 ಜನವರಿ 2017, 9:34 IST

ಮಂಡ್ಯ: ‘ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದರೂ ಸಂವಿಧಾನದ ಆಶಯದಂತೆ ಅವರಿಗೆ ಪೂರ್ಣ ಹಕ್ಕು ಸಿಕ್ಕಿಲ್ಲ’ ಎಂದು ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಎಸ್.ಬಿ. ಸಮುದಾಯ ಭವನದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಎನ್‌ಎಸ್‌ಎಸ್‌ ಹಾಗೂ ಬಸರಾಳುವಿನ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಬುಧವಾರ ನಡೆದ ಬಾಲಕಿಯರ ರಾಜ್ಯಮಟ್ಟದ ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ಸಂವಿಧಾನ ಆಶಯದ ಪ್ರಕಾರ ಸರಿಯಾದ ಸ್ಥಾನಮಾನಗಳು ಸಿಗಬೇಕಿದೆ ಎಂದು ಹೇಳಿದರು. ನಾಯಕತ್ವ ಕೊರತೆಯಿಂದ ಹೆಣ್ಣುಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ವಿದ್ಯಾರ್ಥಿನಿಯರಿಗೆ ಎನ್ಎಸ್ಎಸ್ ಶಿಬಿರವು ನಾಯಕತ್ವ ಗುಣ ಬೆಳೆಸುತ್ತದೆ ಎಂದು ತಿಳಿಸಿದರು.

ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಮಹಿಳೆಯರು ಮೇಲ್ನೋಟದ ಬದಲಾವಣೆಗೆ ಸೀಮಿತ ಆಗಬಾರದು. ಅಂತರಂಗದ ಬದಲಾವಣೆ ಮುಖ್ಯ ಎಂದು ಹೇಳಿದರು. ಮೈಸೂರು ವಿಭಾಗದ ಸಹಾಯಕ ಸಂಯೋಜನಾಧಿಕಾರಿ ಸಿ.ಆರ್.ದಿನೇಶ್ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ತಾ.ಪಂ. ಮಾಜಿ ಸದಸ್ಯ ಎಂ.ಜಿ. ತಿಮ್ಮೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆಯ ಎನ್ಎಸ್ಎಸ್ ವಿಭಾಗದ ರಾಜ್ಯ ಸಂಯೋಜನಾಧಿಕಾರಿ ಪಿ.ಆರ್.ಗಾಯತ್ರಿರೆಡ್ಡಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಬಿ.ಎಂ.ಶ್ರೀಕಂಠಯ್ಯ, ಕಾಲೇಜಿನ ಪ್ರಾಂಶುಪಾಲ ಚಂದ್ರೇಗೌಡ, ಸಿಬಿಸಿ ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯಕ್ರಮಾಧಿಕಾರಿ ಮನುಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.