ADVERTISEMENT

ಮಾನವ ಹಕ್ಕು ಮಾಹಿತಿ ಗುಟ್ಟಾಗಿಸದಿರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:34 IST
Last Updated 12 ಜನವರಿ 2017, 6:34 IST

ಮಂಡ್ಯ: ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬಾರದು ಎಂಬ ಭಾವನೆ ಸರ್ಕಾರಿ ಅಧಿಕಾರಿಗಳಲ್ಲಿದೆ. ಆ ಭಾವನೆ ಬಿಟ್ಟು ಎಲ್ಲರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳಲ್ಲಿನ ಅನುಪಾಲನಾ ವರದಿ ಹಾಗೂ ಅರ್ಜಿಗಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಇನ್ನು ಅವಿದ್ಯಾವಂತರಿಗೆ ಎಲ್ಲಿಂದ ತಿಳಿಯಬೇಕು. ಜನರಿಗೆ ತಿಳಿಸಿಕೊಡಬೇಕು. ಜನ ತಿಳಿದುಕೊಂಡರೆ ಕಷ್ಟ ಎಂಬ ಭಾವನೆ ಬಿಡಬೇಕು ಎಂದು ಅವರು ಹೇಳಿದರು.

ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಅವುಗಳ ಬಗ್ಗೆ ಅನುಪಾಲನಾ ವರದಿ ಕಳುಹಿಸಬೇಕು. ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು. ವಿಶೇಷವಾಗಿ ಪೊಲೀಸರು ಜನರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಆಗದೇ ಇದ್ದಾಗ ಸಾರ್ವಜನಿಕರು ಹೆದರದೇ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡಬಹುದು ಎಂದು ಸಲಹೆ ಮಾಡಿದರು.

ವಿದ್ಯುತ್‌ ಅವಘಡದಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ, ಸುಟ್ಟು ಹೋದ ಗುಡಿಸಲುಗಳ ಮಾಲೀಕರಿಗೆ ಶೀಘ್ರ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು. ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಹಲವಾರು ಸಮಸ್ಯೆಗಳಿಗೆ ಏಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಡವರಿಗೆ ಸ್ಪಂದಿಸುವುದಿಲ್ಲ. ಶ್ರೀಮಂತರಿಗೆ ಅಧಿಕಾರಿಗಳು ಸ್ಪಂದಿಸುತ್ತಾರೆ. ಬಡವರಿಗೆ ಒಂದು ನ್ಯಾಯ, ಸಿರಿವಂತರಿಗೇ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಅವರು, ಹಲವು ಪ್ರಕರಣಗಳು ಈಗಾಗಲೇ ಇತ್ಯರ್ಥ ಆಗಿವೆ. ಕೆಲವು ನ್ಯಾಯಾಲಯದಲ್ಲಿ ಇವೆ. ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದರು.

ಅಧ್ಯಕ್ಷರಿಗೆ ಮನವಿ: ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಕಳೆದ ನಾಲ್ಕು ತಿಂಗಳ ಸಂಬಳ ನೀಡದೇ ಕಿರುಕುಳ ನೀಡುತ್ತಿದ್ದಾರೆ.  ಸುಳ್ಳು ದೂರು ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿಕೊಂಡರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌ ರೆಡ್ಡಿ , ಜಿ.ಪಂ. ಸಿಇಒ ಬಿ.ಶರತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ಯೋಜನಾ ನಿರ್ದೇಶಕ ಗಣಪತಿ ನಾಯ್ಕ ಈ ಸಂದರ್ಭದಲ್ಲಿ ಇದ್ದರು.

ನಮ್ಮದು ಪೊಲೀಸ್‌ ರಾಜ್ಯವಲ್ಲ: ಮೀರಾ
ಮಂಡ್ಯ: ‘ನಮ್ಮದು ಪೊಲೀಸ್‌ ರಾಜ್ಯವಲ್ಲ, ಇದು ಪೊಲೀಸರಿಗೆ ಅರ್ಥವಾಗುತ್ತಿಲ್ಲ, ದೂರು ನೀಡಲು ಬಂದ ಆ ವ್ಯಕ್ತಿಯ ಮೇಲೆಯೇ ಸುಳ್ಳು ದೂರು ದಾಖಲು ಮಾಡಿಕೊಳ್ಳುತ್ತೇವೆ’ ಎಂದು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಟೀಕಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಖಾಕಿ ಸಮವಸ್ತ್ರ ಧರಿಸಿದ ಮೇಲೆ ಪೊಲೀಸರು ಮನಸ್ಸಿಗೆ ತೋಚಿದಂತೆ ವರ್ತಿಸುತ್ತಾರೆ. ದೂರು ನೀಡಿದವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳದೇ ಉಳ್ಳವರ ಪರವಾಗಿ ರಾಜಿ ಸಂಧಾನಕ್ಕೆ ಮುಂದಾಗುತ್ತಾರೆ. ಇದನ್ನು ಪ್ರಶ್ನಿಸಿದರೆ, ಸುಳ್ಳು ಪ್ರಕರಣ ದಾಖಲು ಮಾಡುತ್ತೇನೆ ಎಂದು ಹೆದರಿಸುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಪೊಲೀಸರಿಗೆ ಕೆಲಸದಲ್ಲಿ ಒತ್ತಡವಿದೆ ನಿಜ. ಹಾಗಂತ  ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಾರದು. ಜನರ ಜತೆ ತಾಳ್ಮೆಯಿಂದ ವರ್ತಿಸಬೇಕು. ರಕ್ಷಣೆ ಕೋರಿ ಪೊಲೀಸ್‌ ಠಾಣೆಗೆ ನೊಂದವರು ಬರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT