ADVERTISEMENT

ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:23 IST
Last Updated 22 ಜುಲೈ 2017, 9:23 IST

ಮಂಡ್ಯ: ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲವನ್ನು ಕೇಂದ್ರ ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ರೈತ ಹುತಾತ್ಮರ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.

ನಗರದ ಕೆ.ಆರ್‌.ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ಅವರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ರಾಜ್ಯ ಸರ್ಕಾರ ₹ 50 ಸಾವಿರ ಮನ್ನಾ ಮಾಡಿದ್ದು, ಕೆಲವು ಷರತ್ತು ಹಾಕಿದೆ. ಈ ಕಾಲಮಿತಿಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು. ಹೊಸದಾಗಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕೆ.ಆರ್‌.ಎಸ್‌. ಅಣೆಕಟ್ಟೆಯಿಂದ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು. ಜಿಲ್ಲೆಯ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಸರಿಯಲ್ಲ. ತಕ್ಷಣ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಬೆಳೆಗಾರರಿಗೆ ನಿಲ್ಲಿಸಿರುವ ಪೋತ್ಸಾಹ ಧನ ನೀಡಬೇಕು. ಗುಣಮಟ್ಟದ ರೇಷ್ಮೆ ಮೊಟ್ಟೆ ವಿತರಣೆ ಮಾಡಬೇಕು. ಒಣಗಿದ ತೆಂಗಿನ ಮರಗಳಿಗೆ ಪರಿಹಾರ ನೀಡಬೇಕು. ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಯಲ್ಲಿ ಕೊಬ್ಬರಿ ಶಾಶ್ವತ ಖರೀದಿ ಕೇಂದ್ರ ತೆರೆಯಬೇಕು. ಜತೆಗೆ ಟೆಂಡರ್‌ ಮೂಲಕ ಖರೀದಿಸಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡಿರುವ ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ₹ 200 ಹಾಗೂ ಕಾರ್ಖಾನೆಯ ₹ 2,300 ಸೇರಿಸಿ ನೀಡಬೇಕು. ಡಾ.ರಂಗನಾಥ್‌ ವರದಿಯ ಶಿಫಾರಸ್ಸನ್ನು ಅನುಷ್ಠಾನಗೊಳಿಸಬೇಕು. ಅನಧಿಕೃತ ಕಂಪೆನಿಗಳು ರೈತರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿವೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಬೋರಾಪುರ ಶಂಕರೇಗೌಡ, ಮಂಜೇಶ್‌ಗೌಡ, ಸ್ವಾಮೀಗೌಡ, ಕೆ.ರಾಮಲಿಂಗೇಗೌಡ, ಕೆ.ನಾಗೇಂದ್ರಸ್ವಾಮಿ, ವೈ.ಕೆ.ರಾಮೇಗೌಡ, ಡಿ.ಎಸ್‌.ಚಂದ್ರಶೇಖರ್‌, ಶಿವರುದ್ರ, ಜಗದೀಶ್‌ ಇದ್ದರು.

ತಾಲ್ಲೂಕು ಘಟಕ ಪ್ರತಿಭಟನೆ: ಕಾವೇರಿ ಅಚ್ಚುಕಟ್ಟು ಪ್ರದೇಶದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ರೈತ ಸಂಘ(ಮೂಲ ಸಂಘಟನೆ)ದ ತಾಲ್ಲೂಕು ಘಟಕದ ಕಾರ್ಯಕರ್ತರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದರು.

ಜನ–ಜಾನುವಾರುಗಳಿಗೆ ಕುಡಿಯಲು ನೀರು ಹರಿಸಬೇಕು. ಅಂತರ್ಜಲ ಅಭಿವೃದ್ಧಿಗೆ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಬೇಕು. ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ತಕ್ಷಣ ನಿಲ್ಲಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್‌, ಇಂಡುವಾಳು ಚಂದ್ರಶೇಖರ್‌, ಇಂಡುವಾಳು ಬಸವರಾಜು, ಕೆ.ಎಸ್‌.ಸುಧೀರ್‌ಕುಮಾರ್‌, ಮಹೇಶ್‌, ಪ್ರಿಯಾಂಕಾ, ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.