ADVERTISEMENT

ರೈತರಿಗಾಗಿ ಜೆಡಿಎಸ್‌ ನಿರಂತರ ಹೋರಾಟ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:20 IST
Last Updated 20 ಏಪ್ರಿಲ್ 2017, 6:20 IST

ಪಾಂಡವಪುರ: ರಾಜ್ಯದ ರೈತರು ನೆಮ್ಮದಿಯಿಂದಿರಬೇಕು ಎಂದು ದೇವೇಗೌಡರು, ಕುಮಾರಸ್ವಾಮಿ ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.ತಾಲ್ಲೂಕಿನ ಕಾಳೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ರಾಜ್ಯದಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಸರ್ಕಾರ ಇದ್ದಾಗ ಹತ್ತಾರು ಜನಪ್ರಿಯ ಕೆಲಸಗಳಾಗಿದ್ದವು. ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿಯೇ ನಡೆಯಿತು. ಕುಮಾರಸ್ವಾಮಿ ರಾಜ್ಯಾದ್ಯಂತ 260 ಪ್ರಥಮ ದರ್ಜೆ ಕಾಲೇಜುಗಳು, 600 ಪಿಯು ಕಾಲೇಜುಗಳು, 1200 ಪ್ರೌಢಶಾಲೆಗಳನ್ನು ಪ್ರಾರಂಭಿಸಿ 4800 ಶಿಕ್ಷಕರನ್ನು ನೇಮಕ ಮಾಡಿಕೊಂಡರು. ಆ ನಂತರ ಬಂದ ಸರ್ಕಾರಗಳು ಎಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಂಡಿವೆ  ಎಂದು ಸರ್ಕಾರವನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವ ಆಲೋಚನೆಗೆ ಮುಂದಾಗಿಲ ್ಎಂದು ಟೀಕಿಸಿದರು. ಕುಮಾರಸ್ವಾಮಿ ಸರ್ಕಾರ  ಇದ್ದಾಗ ಬಿಜೆಪಿಯವರು ಸಾಲ ಮನ್ನಾ ಮಾಡಲು ಬಿಡಲಿಲ್ಲ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ರೇವಣ್ಣ ಅವರು ಕೆಎಂಎಫ್‌ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೈನುಗಾರಿಕೆಯಲ್ಲಿ ಹೊಸ ಕ್ರಾಂತಿಯೇ ನಡೆಯಿತು ಎಂದರು. ರೇವಣ್ಣ ಅವರು ಸಚಿವರಾಗಿದ್ದಂತಹ ಸಂದರ್ಭದಲ್ಲಿ ಪಾಂಡವಪುರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿ 2008ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಲು ಕಾರಣವಾಗಿತ್ತು. ಈಚಿನ ದಿನಗಳಲ್ಲಿ ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು ಎಂದರು.

ಸಮಾರಂಭಕ್ಕೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಮನ್‌ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಉಪಾಧ್ಯಕ್ಷ ಜಿ.ಇ.ರವಿಕುಮಾರ್, ಮುನ್‌ಮುಲ್ ವ್ಯವಸ್ಥಾಪಕ ಡಾ.ಗುರುಲಿಂಗಯ್ಯ ಸೇರಿದಂತೆ ಮನ್‌ಮುಲ್ ಅಧಿಕಾರಿಗಳು ಗೈರು ಹಾಜರಾಗಿದ್ದರು.ಡೇರಿ ಅಧ್ಯಕ್ಷೆ ಪ್ರೇಮಾ ಕಾಂತರಾಜು, ಜಿ.ಪಂ. ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲಾ, ಅನಸೂಯಾ, ತಾ.ಪಂ. ಅಧ್ಯಕ್ಷ ರಾಧಮ್ಮ ಕೆಂಪೇಗೌಡ, ಸದಸ್ಯರಾದ ಸಿ.ಎಸ್.ಗೋಪಾಲಗೌಡ, ಗೋವಿಂದಯ್ಯ, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಕೆ.ಎಸ್.ಜಯರಾಮು, ಗ್ರಾ.ಪಂ. ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಸಿ.ಶಿವಕುಮಾರ್, ಜೆ.ರವಿ, ಸಿ.ಎ.ಲೋಕೇಶ್, ಸಿ.ಡಿ,ಮಹದೇವು, ಚಿನಕುರಳಿ ಡೇರಿ ಅಧ್ಯಕ್ಷ ಸಿ.ಡಿ.ಮಹೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು, ಮನ್‌ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ, ಮುಖಂಡರಾದ ಶಿವಕುಮಾರ್, ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.