ADVERTISEMENT

ರೈತರಿಗೆ ನೋಟಿಸ್‌ ನೀಡಿ ಕಿರುಕುಳ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:37 IST
Last Updated 25 ಏಪ್ರಿಲ್ 2017, 6:37 IST

ಶ್ರೀರಂಗಪಟ್ಟಣ: ಮುತ್ತೂಟ್‌ ಫೈನಾನ್‌್ಸ ಸಂಸ್ಥೆಯು ರೈತರು ಗಿರವಿ ಇಟ್ಟಿರುವ ಚಿನ್ನಾಭರಣಗಳನ್ನು ಹರಾಜು ಹಾಕುವ ಮತ್ತು ನೋಟಿಸ್‌ ನೀಡುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯ ಕರ್ತರು ಸಂಸ್ಥೆಯ ಶಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು– ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಸಂಸ್ಥೆಯ ಎದುರು ಅರ್ಧ ದಿನ ಪ್ರತಿಭಟನೆ ನಡೆಸಿದರು. ಸಂಸ್ಥೆಯ ವಿಭಾಗೀಯ ಮುಖ್ಯಸ್ಥರು ಬರುವುದು ತಡವಾದ ಕಾರಣ ಒಂದೂವರೆ ತಾಸು ಸಂಸ್ಥೆಯ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಮೇಲಿಂದ ಮೇಲೆ ಏಕೆ ನೋಟಿಸ್‌ ನೀಡುತ್ತಿದ್ದೀರಿ ಎಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಸಮಂಜಸ ಉತ್ತರ ಸಿಗುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲೇ ಆಹಾರ ಸೇವಿಸಿ ಧರಣಿ ನಡೆಸಿದರು.

ADVERTISEMENT

ರೈತರು ಅಡವಿಟ್ಟಿರುವ ಆಭರಣ ಗಳನ್ನು ಹರಾಜು ಹಾಕಬಾರದು; ನೋಟಿಸ್‌ ನೀಡಬಾರದು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ರೈತರನ್ನು ಸುಲಿಗೆ ಮಾಡುತ್ತಿವೆ ಎಂದು ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ದೂರಿದರು.

ನಿಯಮ ಉಲ್ಲಂಘಿಸಿ ರೈತರಿಗೆ ಕಿರುಕುಳ ನೀಡಿದರೆ ಪಟ್ಟಣದಲ್ಲಿರುವ ಮುತ್ತೂಟ್‌ ಸಂಸ್ಥೆಯ ಮೂರೂ ಶಾಖೆ ಗಳನ್ನು ಬಂದ್‌ ಮಾಡಿಸಲಾಗುವುದು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಎಚ್ಚರಿಸಿದರು.

ಚಿನ್ನಾಭರಣ ಹರಾಜು ಹಾಕದಂತೆ ಮೇಲಧಿಕಾರಿಗಳ ಮನವೊಲಿಸಲಾ ಗುವುದು ಎಂದು ಸ್ಥಳೀಯ ಶಾಖೆಯ ವ್ಯವಸ್ಥಾಪಕರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಪಿಎಸ್‌ಸಿ ಎಸ್‌ಕೆ ನಿರ್ದೇಶಕರಾದ ಪಾಂಡು, ಬಿ.ಸಿ.ಕೃಷ್ಣೇಗೌಡ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಗಂಜಾಂ ರವಿಚಂದ್ರ, ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಡತನಾಳು ಬಾಬು, ಮಹದೇವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.