ADVERTISEMENT

ರೈಲ್ವೆ ವಿಭಾಗ: 608.97 ಕೋಟಿ ಆದಾಯ ಗಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:17 IST
Last Updated 13 ಏಪ್ರಿಲ್ 2017, 6:17 IST

ಮೈಸೂರು:  2016–17ನೇ ಸಾಲಿನಲ್ಲಿ ಮೈಸೂರು ರೈಲ್ವೆ ವಿಭಾಗವು ಒಟ್ಟಾರೆ ₹ 608.97 ಕೋಟಿ ಆದಾಯ ಗಳಿಸಿದ್ದು, ಕಳೆದ ಸಾಲಿಗಿಂತ ಶೇ 0.03 ಹೆಚ್ಚಳ ಕಂಡುಬಂದಿದೆ ಎಂದು ವಿಭಾಗದ ವ್ಯವಸ್ಥಾಪಕ ಅತುಲ್‌ ಗುಪ್ತಾ ಹೇಳಿದರು.

ನಗರದ ರೈಲ್ವೆ ಕಲ್ಯಾಣಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ 62ನೇ ರೈಲ್ವೆ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ₹ 608.79 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ 4,81,50,000 ಕ್ವಿಂಟಲ್‌ ಸರಕು ಸಾಗಣೆ ಮಾಡಲಾಗಿತ್ತು. ಕಳೆದ ವರ್ಷ 5,03,80,000 ಕ್ವಿಂಟಲ್‌ ಸಾಗಣೆಯಾಗಿತ್ತು. ಸರಕು ಸಾಗಣೆಯಲ್ಲಿ ಕೊಂಚ ಇಳಿಕೆಯಾಗಿದೆ. ರೈಲು ಸಂಚಾರದಲ್ಲಿ ಶೇ 97.58ರಷ್ಟು ಸಮಯಪಾಲನೆಯಾಗಿದೆ ಎಂದರು.

ಪ್ರಯಾಣಿಕರ ಸಂಚಾರದಲ್ಲಿ ಕೊಂಚ ಇಳಿಮುಖವಾಗಿದೆ. ಈ ವರ್ಷ 4.81 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷ 4.84 ಕೋಟಿ ಸಂಚರಿಸಿದ್ದರು. ನಿಯಮ ಉಲ್ಲಂಘನೆ ಮತ್ತು ಟಿಕೆಟ್‌ರಹಿತ ಪ್ರಯಾಣ ಬಾಬ್ತಿನಲ್ಲಿ ₹ 4.65 ಕೋಟಿ ಸಂಗ್ರಹವಾಗಿದೆ. ಹಿಂದಿನ ವರ್ಷ ₹ 4.86 ಕೋಟಿ ಸಂಗ್ರಹವಾಗಿತ್ತು ಎಂದು ಹೇಳಿದರು.

ADVERTISEMENT

ಹಾಸನ– ಅರಸೀಕೆರೆ ಮಾರ್ಗದ ರೈಲುಗಳ ಸಂಚಾರ ವೇಗವನ್ನು 60 ಕಿ.ಮೀ.ನಿಂದ 80 ಕಿ.ಮೀ.ಗೆ ಹಾಗೂ ಹೊಸದುರ್ಗ ಮತ್ತು ಚಿಕ್ಕಜಾಜೂರು ಮಾರ್ಗದಲ್ಲಿ 90 ಕಿ.ಮೀ.ನಿಂದ 100 ಕಿ.ಮೀ.ಗೆ ಹೆಚ್ಚಿಸಲಾಗಿದೆ. 35 ಲೆವೆಲ್‌ ಕ್ರಾಸಿಂಗ್‌ಗಳನ್ನು (17 ಮಾನವರಹಿತ ಮತ್ತು 18 ಮಾನವಸಹಿತ ಲೆವೆಲ್‌ ಕ್ರಾಸಿಂಗ್‌) ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.