ADVERTISEMENT

ವಿವೇಕಾನಂದನಗರ; ಸೌಲಭ್ಯ ಮರೀಚಿಕೆ

‘ಮುಡಾ’ದಿಂದ ಅಭಿವೃದ್ಧಿಪಡಿಸಿದ ಬಡಾವಣೆ ಗಿಡಗಂಟಿಯಲ್ಲಿ ಕಣ್ಮರೆ

ಬಸವರಾಜ ಹವಾಲ್ದಾರ
Published 9 ಜನವರಿ 2017, 6:54 IST
Last Updated 9 ಜನವರಿ 2017, 6:54 IST
ಮಂಡ್ಯದ ವಿವೇಕಾನಂದ ನಗರದಲ್ಲಿ ಬೆಳೆದು ನಿಂತಿರುವ ಗಿಡಗಳು
ಮಂಡ್ಯದ ವಿವೇಕಾನಂದ ನಗರದಲ್ಲಿ ಬೆಳೆದು ನಿಂತಿರುವ ಗಿಡಗಳು   

ಮಂಡ್ಯ: ಇದೊಂದು ಬಡಾವಣೆ. ಆದರೆ, ಇಲ್ಲಿ ಸಂಚರಿಸಿದರೆ ಬಡಾವಣೆ ಎನ್ನುವುದಕ್ಕಿಂದ ಯಾವುದೋ ಕಾಡಿನೊಳಕ್ಕೆ ಹೊಕ್ಕ ಅನುಭವವಾದರೆ ಅಚ್ಚರಿ ಇಲ್ಲ..!
ಬಡಾವಣೆ ರಚನೆಯಾಗಿ ದಶಕ ಕಳೆದಿದೆ. ಆದರೆ, ಮೂಲಸೌಲಭ್ಯಗಳು ಇನ್ನೂ ದೊರೆತಿಲ್ಲ. ಖಾಲಿ ನಿವೇಶನಗಳಲ್ಲಿ ಜಾಲಿ ಇತ್ಯಾದಿ ಗಿಡಗಳು ಬೆಳೆದು ನಿಂತಿವೆ. ರಸ್ತೆ, ಚರಂಡಿಯಾಗದೇ ಮಳೆಗಾಲ ಬಂದರೆ ಪರದಾಡಬೇಕಾದ ಸ್ಥಿತಿ ಅಲ್ಲಿನ ನಿವಾಸಿಗಳದ್ದಾಗಿದೆ.

ಕೆರೆಯಂಗಳದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಬಡಾವಣೆಯೇ ವಿವೇಕಾನಂದ ನಗರ. ಬಡಾವಣೆ ಅಭಿವೃದ್ಧಿ ಮಾಡಿದ್ದು ಬಿಟ್ಟರೆ, ಇಲ್ಲಿ ಸೌಲಭ್ಯ ಒದಗಿಸಿದ್ದು ಬಹಳ ಕಡಿಮೆ.

ಬಡಾವಣೆ ರಚನೆಯಾಗಿ ದಶಕಗಳು ಕಳೆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ಖಾಲಿ ನಿವೇಶನಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಆ ನಿವೇಶನಗಳಲ್ಲಿ ಜಾಲಿ ಇತ್ಯಾದಿ ಗಿಡಗಳು ಬೆಳೆದು ಕಾಡಿನಂತಾಗಿವೆ.

ಪೊದೆ ಬೆಳೆದಿರುವುದರಿಂದ ಅಲ್ಲಿರುವ ನಿವಾಸಿಗಳೂ ತೊಂದರೆ ಅನುಭವಿಸಬೇಕಾದ ಸ್ಥಿತಿ ಇದೆ. ಹುಳ, ಹುಪ್ಪಡಿಗಳ ಕಾಟ ಜಾಸ್ತಿಯಾಗಿದೆ. ರಾತ್ರಿ ವೇಳೆಯಂತೂ ದಟ್ಟ ಕಾಡಿನಲ್ಲಿ ಹೋದ ಅನುಭವವಾಗುತ್ತದೆ. ಸಂಜೆಗೆ ಮನೆ ಸೇರಬೇಕಾದ ಸ್ಥಿತಿ ಇದೆ.

ಖಾಲಿ ಇರುವ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆಗಾಗ ನಗರಸಭೆ ಪ್ರಕಟಣೆ ಹೊರಡಿಸುತ್ತದೆ. ವಿವೇಕಾನಂದನಗರ ಸೇರಿದಂತೆ ನಗರದ ಬಹುತೇಕ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳು ಕಸದ ಕೊಂಪೆಗಳಾಗಿವೆ.

ವಿವೇಕಾನಂದ ನಗರವು ‘ಮುಡಾ’ ವಶದಲ್ಲಿಯೇ ಇದೆ. ಇನ್ನೂ ನಗರಸಭೆಗೆ ಹಸ್ತಾಂತರವಾಗಿಲ್ಲ. ಎರಡೂ ಅಧಿಕಾರ ಕೇಂದ್ರಗಳ ನಡುವೆ ಬಡಾವಣೆ ಸೌಲಭ್ಯದಿಂದ ವಂಚಿತವಾಗಿದೆ.

ರಸ್ತೆ, ಚರಂಡಿ ಇನ್ನೂ ಕನಸು: ಬೀಡಿ ಕಾಲೊನಿ ಸೇರಿದಂತೆ ಅಲ್ಲಿನ ನಿವಾಸಿಗಳು ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಬೇಕು ಎಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಹೋರಾಟ ಮಾಡಿದ್ದಾರೆ. ಆದರೆ, ಪ್ರಯೋಜನ ಮಾತ್ರ ಶೂನ್ಯ.

ಮಳೆ ಬಂದರೆ ಬಡಾವಣೆ ಹಾಗೂ ಬೀಡಿ ಕಾಲೊನಿಯಲ್ಲಿ ತಿರುಗಾಡಲು ಸಾಧ್ಯವಾಗದ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಕೆರೆ ಇದ್ದ ಪ್ರದೇಶ ವಾಗಿದ್ದರಿಂದ ನೀರು ಹರಿದು ಮುಂದೆ ಸಾಗುವುದೇ ಇಲ್ಲ. ವಾರಗಟ್ಟಲೇ ನೀರು ನಿಂತಿರುತ್ತದೆ. ಅದರಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಅವರದ್ದಾಗಿದೆ.

ಬಡಾವಣೆ ರಚಿಸಿರುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಆರಂಭದಲ್ಲಿ ರಸ್ತೆ, ಕೆಲವೆಡೆ ಚರಂಡಿ ನಿರ್ಮಾಣ ಮಾಡಿತ್ತು. ಆಗ ನಿರ್ಮಾಣದ ಮಾಡಿದ ರಸ್ತೆಗಳು ಹಾಳಾಗಿವೆ. ಮತ್ತೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ.

‘ಮುಡಾ’ ವತಿಯಿಂದ ಈಗಾಗಲೇ ಎರಡು ಬಾರಿ ಗಿಡಗಳನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಜೆಸಿಬಿಯಿಂದ ಸ್ವಚ್ಛಗೊಳಿಸಲಾಗಿದೆ. ಖಾಲಿ ನಿವೇಶನ ಮಾಲೀಕರ ನಿರ್ಲಕ್ಷ್ಯದಿಂದ ಮತ್ತೆ ಗಿಡಗಳು ಬೆಳೆದು ನಿಂತಿದ್ದು, ಜೀವಭಯದಲ್ಲಿ ತಿರುಗಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.