ADVERTISEMENT

ವಿವೇಕಾನಂದರು ಯುವಜನತೆಗೆ ಸ್ಫೂರ್ತಿ

ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ: ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 8:43 IST
Last Updated 13 ಜನವರಿ 2017, 8:43 IST
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು ಮಾತನಾಡಿದರು.
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು ಮಾತನಾಡಿದರು.   
ಮಂಡ್ಯ: ‘ಯುವಜನರೇ ದೇಶದ ಸಂಪತ್ತು. ಅವರಲ್ಲಿ ದೇಶವನ್ನೇ ಬದಲಿಸುವ ಶಕ್ತಿ ಅಡಗಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆ ನಿಟ್ಟಿನಲ್ಲಿ ಯುವಜನತೆ ಸಾಗಬೇಕು’ ಎಂದು ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು ಸಲಹೆ ಮಾಡಿದರು.
 
ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಸರ್ಕಾರಿ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ವಿವೇಕಾನಂದರು ವಿಶ್ವಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದರು. ದೇಶದ ಸಂಪತ್ತಾದ ಯುವ ಶಕ್ತಿಯನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುವುದು ಅವರ ಬಲವಾದ ನಿಲುವಾಗಿತ್ತು ಎಂದರು.
 
ದೇಶದಲ್ಲಿನ ಕೀಳರಿಮೆ, ಅಸಮಾನತೆ ಹಾಗೂ ಧರ್ಮಗಳ ನಡುವೆ ಗುದ್ದಾಟದಂತಹ ಘಟನೆಗಳನ್ನು ಬೇರು ಸಹಿತ ಕಿತ್ತು ಹಾಕಲು ವಿವೇಕಾನಂದರು ಪಣ ತೊಟ್ಟಿದ್ದರು. ಕೇವಲ 39 ವರ್ಷ ಬದುಕಿದ್ದ ವಿವೇಕಾನಂದರನ್ನು ಇಂದಿಗೂ ಎಲ್ಲರೂ ದೇವರು ಎಂದು ಪೂಜಿಸುತ್ತಾರೆ. ಅವರು ನಡೆದ ದಾರಿ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.
 
ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಮನುಷ್ಯ ಕುಲವೇ ತಲೆತಗ್ಗಿಸುವ ವಿಷಯ ಆಗಿದೆ ಎಂದರು.
 
ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಬಿಟ್ಟರೆ ಇನ್ನುಳಿದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 
ಸರ್ಕಾರಿ ಕಾಲೇಜು ಪ್ರಾಂಶುಪಾಲ ಎ.ಬಿ. ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ವಿಬ್‌ಸಿಟಿ ನಿರ್ದೇಶಕ ಕೆ.ಎಸ್‌.ಬಸವರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌, ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್‌. ಸಿದ್ದರಾಮಪ್ಪ, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಲಿಂಗರಾಜು ಉಪಸ್ಥಿತರಿದ್ದರು. 
 
**
ಲೋಕ ಕಲ್ಯಾಣಕ್ಕಾಗಿ ದೀಕ್ಷೆ ತೊಟ್ಟ ಮಹಾನ್‌ ಸಂತ
ಮಂಡ್ಯ: ಲೋಕ ಕಲ್ಯಾಣಕ್ಕಾಗಿ ದೀಕ್ಷೆ ತೊಟ್ಟು, ಭಾರತೀಯ ಸಂಸ್ಕೃತಿ ಸಾರಲು ದೇಶ, ವಿದೇಶ ಸುತ್ತಿದ ಸ್ವಾಮಿ ವಿವೇಕಾನಂದರು ಮಹಾನ್ ಸಂತರಾಗಿದ್ದರು ಎಂದು ಸ್ವದೇಶಿ ಚಿಂತಕ ಪಂಚಾಕ್ಷರಿ ಗಂಗಾಡ್ಕರ್‌ ಹೇಳಿದರು.
 
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಾವಯವ ಕೃಷಿಕರ ಸಹಕಾರ ಸಂಘ ಹಾಗೂ ಅರ್ಗ್ಯಾನಿಕ್‌ ವತಿಯಿಂದ ರಾಷ್ಟ್ರೀಯ ಯುವದಿನದ ಅಂಗವಾಗಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಸಾವಯವ ಕೃಷಿ- ವಿಷಮುಕ್ತ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ವಿವೇಕಾನಂದರ ಹೆಸರು ಕೇಳಿದರೆ ಯುವಜನರು ರೋಮಾಂಚಿತಗೊಳ್ಳುತ್ತಾರೆ. ಅವರು ದೇಶಕ್ಕಾಗಿ ತನು, ಮನ, ಧನ ತ್ಯಾಗಮಾಡಿದ ಮಹನೀಯರು. ಅವರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಇದೆ ಎಂದು ಸಲಹೆ ಮಾಡಿದರು.
 
ಮಹಿಳೆಯರನ್ನು ಗೌರವಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ವಿವೇಕಾನಂದರ ಅಣತಿಯಂತೆ ಮೈಸೂರಿನ ಮಹಾರಾಜರು ವಿಶ್ವವಿದ್ಯಾಲಯ ತೆರೆದು ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಿದ್ದರು ಎಂದು ಸ್ಮರಿಸಿದರು. 
 
ಪ್ರಾಂಶುಪಾಲ ಪ್ರೊ.ವಿ.ಟಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಸೋಮಶೇಖರ್ ಕೆರಗೋಡು, ಸಾವಯವ ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಮಧುಚಂದನ್ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.