ADVERTISEMENT

ಶಿಕ್ಷಕ ದಂಪತಿಯ ಮಾದರಿ ಸೇವೆ

ಗಣಂಗೂರು ನಂಜೇಗೌಡ
Published 5 ಸೆಪ್ಟೆಂಬರ್ 2017, 7:25 IST
Last Updated 5 ಸೆಪ್ಟೆಂಬರ್ 2017, 7:25 IST
ಶ್ರೀರಂಗಪಟ್ಟಣ ತಾಲ್ಲೂಕು ಬೆಳವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಿನೇಶ್‌ ಮತ್ತು ಲಕ್ಷ್ಮಿ ದಂಪತಿ
ಶ್ರೀರಂಗಪಟ್ಟಣ ತಾಲ್ಲೂಕು ಬೆಳವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಿನೇಶ್‌ ಮತ್ತು ಲಕ್ಷ್ಮಿ ದಂಪತಿ   

ಶ್ರೀರಂಗಪಟ್ಟಣ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇಂತಹ ಅಪವಾದದ ನಡುವೆಯೂ ತಾಲ್ಲೂಕಿನ ಬೆಳವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಂಪತಿ ತಮ್ಮ ಮಾದರಿ ಸೇವೆಯ ಮೂಲಕ ತಾಲ್ಲೂಕಿನ ಶಿಕ್ಷಕರ ವಲಯದಲ್ಲಿ ‘ಮಾದರಿ ಶಿಕ್ಷಕ ದಂಪತಿ’ ಎಂದು ಹೆಸರು ಮಾಡಿದ್ದಾರೆ.

ಶಾಲೆಯ ಸಹ ಶಿಕ್ಷಕರಾದ ದಿನೇಶ್‌ ಮತ್ತು ಲಕ್ಷ್ಮಿ ದಂಪತಿ ಕಳೆದ 7 ವರ್ಷಗಳಿಂದ (2011ರಿಂದ)ಈ ಶಾಲೆಯಲ್ಲಿ ಒಟ್ಟಿಗೇ ಸೇವೆ ಸಲ್ಲಿಸುತ್ತಿದ್ದಾರೆ. ಈ ದಂಪತಿ ಶಾಲೆಗೆ ಬಂದ ನಂತರ ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಪರಿಸರ ಸಂಪೂರ್ಣ ಬದಲಾಗಿದೆ. ಶಾಲಾ ಆವರಣದಲ್ಲಿ ಆಕರ್ಷಕ ಕೈತೋಟ, ಸಾವಿರಕ್ಕೂ ಹೆಚ್ಚು ಪುಸ್ತಕ ಇರುವ ಗ್ರಂಥಾಲಯ, ಮಾದರಿ ಎನಿಸುವ ನಲಿ–ಕಲಿ ಕೊಠಡಿ, ವಿದ್ಯಾರ್ಥಿಗಳೇ ಸೃಷ್ಟಿಸಿರುವ ವಿಜ್ಞಾನ ಮಾದರಿಗಳು ಸೃಷ್ಟಿಯಾಗಿವೆ.

ಇವೆಲ್ಲಕ್ಕೂ ಈ ಶಿಕ್ಷಕ ದಂಪತಿಯೇ ಕಾರಣ ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳು ಹೇಳುತ್ತಾರೆ. ಶಿಕ್ಷಕ ದಿನೇಶ್‌ 4ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳನ್ನು ಬೋಧಿಸುತ್ತಾರೆ. ಇವರ ಮಾರ್ಗದರ್ಶನದಲ್ಲಿ ರಾಧಾಕೃಷ್ಣ ಎಂಬ ವಿದ್ಯಾರ್ಥಿ ‘ಮಣ್ಣಿನ ಸವಕಳಿ ಮಾದರಿ’ ಸೃಷ್ಟಿಸಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ADVERTISEMENT

ಈಚೆಗಷ್ಟೇ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶಾಲೆಗೆ 29 ಬಹುಮಾನಗಳು ಸಿಗಲು ದಂಪತಿ ಶ್ರಮಿಸಿದ್ದಾರೆ. ಶಿಕ್ಷಕಿ ಲಕ್ಷ್ಮಿ ನಲಿ–ಕಲಿ ಬೋಧನೆಯ ಜತೆಗೆ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಆಟೋಟ ಕಲಿಸುತ್ತಿದ್ದಾರೆ. ಯೋಗ, ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುತ್ತಾರೆ. ಪ್ರತಿ ಬುಧವಾರ ಒಗಟು ಮತ್ತು ಗಾದೆಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಪ್ರತಿ ದಿನ 4 ಇಂಗ್ಲಿಷ್‌ನ ಹೊಸ ಪದ ಕಲಿಸುವುದು ಈ ಶಾಲೆಯ ವಿಶೇಷ.

ದಂಪತಿ ಇತರ ಶಿಕ್ಷಕರ ಜತೆಗೂಡಿ ಶಾಲೆಯ ಆವರಣದಲ್ಲಿ ಆಕರ್ಷ ಹೂದೋಟ ಬೆಳೆಸಿದ್ದಾರೆ. ಕಾಸ್ಮಾಸ್‌, ದಾಸವಾಳ, ನಂದಿ ಬಟ್ಟಲು, ಸ್ಫಟಿಕ, ಕಾಕಡ, ಡೇರೆ, ಮಲ್ಲಿಗೆ ಹೂ ಗಿಡಗಳು ಕಲರವ ಬೀರುತ್ತವೆ. ಕೊತ್ತಂಬರಿ, ದಂಟು, ಕಿಲಕೀರೆ ಸೊಪ್ಪುಗಳನ್ನು ಶಾಲಾ ಬಿಸಿಯೂಟಕ್ಕೆ ಸಾಕಾಗುವಷ್ಟು ಕೈತೋಟದಲ್ಲಿ ಬೆಳೆಯಲಾಗುತ್ತದೆ. ಈ ಬಾರಿ ನೆಲಗಡಲೆಯನ್ನೂ ಬೆಳೆಯಲಾಗಿದೆ. ಶಾಲೆಯ ಆವರಣದಲ್ಲಿ ತೆಂಗು, ಬಾಳೆ, ಮಾವು, ಬೇವಿನ ಗಿಡಗಳ ಜತೆಗೆ ಸಾಕಷ್ಟು ಅಲಂಕಾರಿಕ ಗಿಡಗಳೂ ಇವೆ.

‘ಸಿಗುವ ಸಮಯವನ್ನು ವ್ಯರ್ಥ ಮಾಡದೆ ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಬಳಸುತ್ತಿದ್ದೇನೆ. ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದು, ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿಯಾದರೆ ಇನ್ನಷ್ಟು ಉತ್ಸುಕತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ದಿನೇಶ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.