ADVERTISEMENT

ಶ್ರೇಷ್ಠ ಕೆಲಸ ನೋಡಲು ಹಳದಿಗಣ್ಣು ಬೇಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:23 IST
Last Updated 11 ಜನವರಿ 2017, 9:23 IST
ಮೈಸೂರಿನ ಕ್ರಾಫರ್ಡ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮತ್ತು ಪತ್ನಿ ಪೂರ್ಣಿಮಾ ರಂಗಪ್ಪ ಅವರನ್ನು ಅಭಿನಂದಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ, ಸಂಗೀತ ನಿರ್ದೇಶಕ ಹಂಸಲೇಖ ಇದ್ದಾರೆ
ಮೈಸೂರಿನ ಕ್ರಾಫರ್ಡ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮತ್ತು ಪತ್ನಿ ಪೂರ್ಣಿಮಾ ರಂಗಪ್ಪ ಅವರನ್ನು ಅಭಿನಂದಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ, ಸಂಗೀತ ನಿರ್ದೇಶಕ ಹಂಸಲೇಖ ಇದ್ದಾರೆ   

ಮೈಸೂರು: ‘ಈ ಸಮಾಜದಲ್ಲಿ ಶ್ರೇಷ್ಠ ಕೆಲಸವನ್ನು ಮಾಡಿದ ವ್ಯಕ್ತಿಯನ್ನು ನೋಡುವ ದೃಷ್ಟಿಕೋನ ಹಳದಿ ಬಣ್ಣದ್ದಾಗಬಾರದು. ಹಾಗೆ ನೋಡಿದರೆ ಎಲ್ಲವೂ ಹಳದಿಯಾಗೇ ಕಾಣುತ್ತದೆ. ಸ್ವಚ್ಛ ಮನಸ್ಸಿನಿಂದ ಜಗತ್ತನ್ನು ನೋಡುವ ಪ್ರವೃತ್ತಿ ಬೆಳೆಯಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುಲಪತಿ ಪ್ರೊ.ಕೆ.ಎಸ್.­ರಂಗಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ವಿಶ್ವ ವಿದ್ಯಾಲಯವೊಂದನ್ನು ಕಟ್ಟುವುದು ಸುಲಭದ ಮಾತಲ್ಲ; ಅದಕ್ಕಾಗಿ ತಪಸ್ಸು ಮಾಡಬೇಕು. ಪ್ರೊ.ರಂಗಪ್ಪ ಅವರು ಮೈಸೂರು ವಿ.ವಿ.ಯನ್ನು ಕಟ್ಟುವ ಸಂದರ್ಭದಲ್ಲಿ ಸಾಕಷ್ಟು ನೊಂದಿದ್ದಾರೆ. ಆದರೆ, ನೋವನ್ನು ಮೌನವಾಗಿ ಸ್ವೀಕರಿಸಿದ್ದಾರೆ. ಕೆಲವೊಮ್ಮೆ ನನ್ನ ಬಳಿ ಹಂಚಿ­ಕೊಂಡಿದ್ದಾರೆ. ಅವರು ವಿ.ವಿ.ಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಕೆಟ್ಟ ಶಕ್ತಿಗಳು ಆ ಎತ್ತರವನ್ನು ಕೆಡವಕೂಡದು. ಬದಲಿಗೆ, ಸಂಸ್ಥೆಯನ್ನು ಬೆಳೆಸುವ, ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವ ಸಹಾಯವನ್ನು ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಚನ್ನಮ್ಮನೇ ಸಾಧನೆ ಕಾರಣ: ‘ನನ್ನ ಸಾಧನೆಗೆ ನನ್ನ ಪತ್ನಿ ಚನ್ನಮ್ಮ ಅವರೇ ಕಾರಣ; ಅಂತೆಯೇ, ಪ್ರೊ.ರಂಗಪ್ಪ ಅವರ ಸಾಧನೆಗೆ ಅವರ ಪತ್ನಿ ಪೂರ್ಣಿಮಾ ಅವರೇ ಕಾರಣ. ಸಾಧಕರ ಪತ್ನಿಯರ ಶ್ರಮ ತೆರೆಯ ಹಿಂದೆ ಸಾಕಷ್ಟು ಇರುತ್ತದೆ, ಅದನ್ನು ಸ್ಮರಿಸಬೇಕು. ಬಡರೈತರ ಮಕ್ಕಳಾಗಿ ನಾನು ಹಾಗೂ ರಂಗಪ್ಪ ಸಾಧನೆ ಮಾಡಿದ್ದೇವೆ. ಪ್ರೊ.ರಂಗಪ್ಪ ಮತ್ತಷ್ಟು ವೈಜ್ಞಾನಿಕ ಸಾಧನೆ ಮಾಡಲಿ. ಬಡಜನತೆಯ ಕಾಯಿಲೆಯನ್ನು ನೀಗಿಸುವ ವಿಜ್ಞಾನವನ್ನು ಶೋಧಿಸಲಿ’ ಎಂದು ಹಾರೈಸಿದರು.

‘ಯಾವುದೇ ಘಟ್ಟದಲ್ಲೂ ನಿರಾಶರಾಗಬಾರದು. ಇದಕ್ಕೆ ನನ್ನನ್ನೇ ಸ್ಫೂರ್ತಿಯಾಗಿ ತೆಗೆದುಕೊಳ್ಳಿ. ಇಂದಿಗೂ ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರದಲ್ಲಿ ಹೋರಾಡುತ್ತಿದ್ದೇನೆ. ನಾನು ರೈತರು ಹುಟ್ಟಿರುವುದೇ ಹೋರಾಡಲು. 50 ವರ್ಷಗಳಿಂದಲೂ ಇದೇ ಕೆಲಸ ಮಾಡುತ್ತಿದ್ದೇನೆ. ನನಗೀಗ ಶಕ್ತಿ ಅಡಗಿದೆ. ದೈಹಿಕವಾಗಿ ಶಕ್ತಿಯಿದ್ದರೂ, ನನ್ನೊಂದಿಗೆ ಇದ್ದವರೆಲ್ಲಾ ಒಬ್ಬೊಬ್ಬರಾಗಿ ದೂರವಾದರು. ಆದರೂ, ಸ್ಥೈರ್ಯ ಕಳೆದುಕೊಂಡಿಲ್ಲ. ನಿರಂತರವಾಗಿ ನಿಮ್ಮ ಕರ್ತವ್ಯವನ್ನು ಮುಂದುವರಿಸಿ’ ಎಂದು ಸಲಹೆ ನೀಡಿದರು.

ಪ್ರೊ.ಕೆ.ಎಸ್.ರಂಗಪ್ಪ ಅವರ ಬೀಳ್ಕೊಡುಗೆ ಸಮಾರಂಭ ಸಮಿತಿಯ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನ­ಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮೈಸೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎನ್‌.ಹೆಗ್ಡೆ, ಸಂಗೀತ ನಿರ್ದೇಶಕ ಹಂಸಲೇಖ, ಪ್ರೊ.ರಂಗಪ್ಪ ಅವರ ಪತ್ನಿ ಪೂರ್ಣಿಮಾ ರಂಗಪ್ಪ ಭಾಗವಹಿಸಿದ್ದರು.

ರಾಜಕೀಯ ರೋಗ ತೊಳೆಯಿರಿ
ಮೈಸೂರು:  ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ರಾಜಕಾರಣದಲ್ಲಿ ಕೆಟ್ಟ ರೋಗಗಳಿವೆ. ಅವನ್ನು ಪ್ರೊ.ರಂಗಪ್ಪ ವಾಸಿ ಮಾಡಬೇಕು. ನೀವು ‘ಯುಜಿಸಿ’ಗೆಲ್ಲಾ ಹೋಗುವುದು ಬೇಡ. ವಿಧಾನಸೌಧಕ್ಕೆ ಬನ್ನಿ. ಅಲ್ಲಿ ಸಜ್ಜನರ ಸಂಖ್ಯೆ ಕಡಿಮೆಯಾಗಿದೆ’  ಎಂದು ಕಿವಿಮಾತು ಹೇಳಿದರು.

‘ದೇವೇಗೌಡ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಮುಂಚಿತವಾಗಿಯೇ ಹೇಳಿದ್ದೆ. ನಾನು ಹೇಳಿದ್ದೆಲ್ಲಾ ಸತ್ಯವೇ ಆಗುತ್ತದೆ. ನೀವು ರಾಜಕೀಯ ಪ್ರವೇಶಿಸಿ. ನಿಮಗೆ ಖಂಡಿತವಾಗಿ ಜಯ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT