ADVERTISEMENT

`ಸಂಸ್ಕೃತ ಭಾಷೆಯೇ ಪ್ರಬಲ'

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2012, 5:36 IST
Last Updated 29 ಡಿಸೆಂಬರ್ 2012, 5:36 IST

ನಾಗಮಂಗಲ: ಭೂಮಿಯ ಉಗಮವಾದಾಗಿನಿಂದ ಸಂಸ್ಕೃತ ಭಾಷೆ ಅಸ್ತಿತ್ವದಲ್ಲಿದೆ. ಇದರ ಸಮಕಾಲೀನ ಭಾಷೆಗಳು ನಶಿಸಿವೆ. ಆದ್ದರಿಂದ ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವ ಸಂಸ್ಕೃತವೇ ಪ್ರಬಲ ಭಾಷೆ ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಕಾಲಭೈರವೇಶ್ವರ ವೇದ ಆಗಮ ಸ್ನಾತಕೋತ್ತರ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಸ್ಕೃತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಂಸ್ಕೃತ ಭಾಷೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಅಷ್ಟೇ ಅಲ್ಲ, ಬೇಡಿಕೆಯನ್ನೂ ಹೊಂದಿದೆ. ಇದು  ಕೇವಲ ಭಾಷೆಯಲ್ಲ, ಸಂಸ್ಕೃತಿಯೂ ಹೌದು. ಸನಾತನ ಭಾಷೆ ಸಂಸ್ಕೃತದ ಆಧಾರದಿಂದಲೇ ಭಾರತ ದೇಶ ಪ್ರಬಲವಾಗಿತ್ತು. ದೇಶ ಒಡೆಯಲು ಬಂದವರು ಮೊದಲು ಸಂಸ್ಕೃತ ನಾಶಕ್ಕೆ ಪ್ರಯತ್ನಿಸಿದರು. ಹೀಗೆ ಸಂಸ್ಕೃತದವರನ್ನು ಆಂಗ್ಲಭಾಷೆಗೆ ಬದಲಾಯಿಸುವಾಗ ಸಂಸ್ಕೃತ ಭಾಷೆ ಅನೇಕ ವರ್ಷಗಳವರೆಗೆ ಅಜ್ಞಾತವಾಸ ಎದುರಿಸಬೇಕಾಯಿತು. ಆದರೆ ಇದರ ಸಾರ, ಸಂಸ್ಕೃತಿ, ಮತ್ತು ಉತ್ಕೃಷ್ಟತೆಯ ಪರಿಣಾಮ ಇಂದಿಗೂ ಅದು ಜೀವಂತವಾಗಿದೆ ಹಾಗೂ ಅತ್ಯಗತ್ಯವಾಗಿದೆ ಎಂದರು.

ಈಗ ಮಾನವ ಇಂಗ್ಲಿಷ್ ಭಾಷೆಯ ನೆರವಿನಿಂದ ಭೌತಿಕ ವಸ್ತುಗಳನ್ನು ಆಶ್ರಯಿಸಿ ಸಂತೋಷವಾಗಿರಲು ಯತ್ನಿಸುತ್ತಿದ್ದಾನೆ. ಆದರೆ ಮನಸ್ಸಿಗೆ ಸಂತೋಷ ಸಿಗುವುದು ಜ್ಞಾನದಿಂದ. ಅಂತಹ ಜ್ಞಾನವನ್ನು ಸಂಸ್ಕೃತ ನೀಡುತ್ತದೆ. ಅದನ್ನು ಎಲ್ಲರೂ ಅಭ್ಯಸಿಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣಗೌಡ ಮಾತನಾಡಿ ಸಂಸ್ಕೃತ ಭಾಷೆಯಲ್ಲಿ ರಚಿತವಾದ ಹಿಂದೂ ಧರ್ಮದ ಪುರಾತನ ಗ್ರಂಥಗಳು ನೀಡುವ ಸಂದೇಶ ಜಗತ್ತಿನ ಯಾವ ಗ್ರಂಥಗಳೂ ನೀಡಲಾರವು ಎಂದರು.

ಮಹದಾಯಿ ನದಿ ಯೋಜನೆ ಅಧ್ಯಕ್ಷ ಜಸ್ಟೀಸ್ ಪಿ.ಎಸ್.ನಾರಾಯಣ ಮಾತನಾಡಿ ಭಾಷಣಗಳಿಂದ,  ವೇದಿಕೆಗಳಿಂದ ಸಂಸ್ಕೃತ ಉಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಕ್ಕಳಿಗೆ ಸಂಸ್ಕೃತ ಕಲಿಸುವುದರಿಂದ ಭಾಷೆ ಉಳಿಸಲು ಸಾಧ್ಯ ಎಂದರು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಶ್ರೀನಿವಾಸ ವರಖೇಡಿ, ಜ್ಯೋತಿಷಿ ಮಹರ್ಷಿ ಡಾ.ಆನಂದ ಗುರೂಜಿ, ಜ್ಯೋತಿಷ್ಯ ವಿದ್ವಾಂಸ ಡಾ.ಎನ್.ಎಸ್.ವಿಶ್ವಪತಿಶಾಸ್ತ್ರಿ ಹಾಗೂ ಆದಿಚುಂಚನಗಿರಿ ಮಠದ ವ್ಯವಸ್ಥಾಪಕ ರಾಮಕೃಷ್ಣೇಗೌಡ ಇದ್ದರು. ಕಾಲಭೈರವೇಶ್ವರ ವೇದ ಆಗಮ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಸಿ.ನಂಜುಂಡಯ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.