ADVERTISEMENT

ಸಾಧಕರ ಸಾಧನೆ ಇತರರಿಗೆ ಮಾರ್ಗದರ್ಶಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:36 IST
Last Updated 31 ಡಿಸೆಂಬರ್ 2016, 5:36 IST

ಮಂಡ್ಯ: ‘ಮಲೆಗಳಲ್ಲಿ ಮದುಮಗಳು’ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ವಿಶ್ವ ಮಾನವ ಸಂದೇಶ ನೀಡುವ ಮೂಲಕ ಕುವೆಂಪು ಅವರು ಚಿರಸ್ಥಾಯಿಯಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ನಗರದ ಕಲಾ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ಸಾಧಕರು’ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ಸಾಧಕರ ಸಾಧನೆ ಇತರರಿಗೆ ಮಾರ್ಗ ದರ್ಶಿಯಾಗಬೇಕು. ಮಹನೀಯರ ನೆನಪಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಸಾಧಕರಿಗೂ ಪ್ರೇರಣೆಯಾಗುತ್ತವೆ ಎಂದರು.

ಗಾಯಕರಾಗಿದ್ದ ಸಿ. ಅಶ್ವತ್ಥ್‌ ಅವರು ನಮ್ಮೆಲ್ಲರನ್ನೂ ಹಾಡಿ ರಂಜಿಸಿದ್ದಾರೆ. ಹಾಡಿನ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ. ಒತ್ತಡದ ಬದುಕಿನಲ್ಲಿ ಜಂಜಾಟ ದಿಂದ ಬದುಕುತ್ತಿದ್ದೇವೆ ಎಂದು ಹೇಳಿದರು.

ಮಾನಸಿಕ ರೋಗ ತಜ್ಞ ಪಿ.ಎಸ್‌. ಸತ್ಯನಾರಾಯಣರಾವ್‌, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಸದಸ್ಯ ಸಂಚಾಲಕ ಡೇವಿಡ್‌ ಉಪಸ್ಥಿತರಿದ್ದರು. ಎಂ.ವಿ. ಶೇಷಾದ್ರಿ, ಪಿ. ರಾಜಗೋಪಾಲ್‌, ವಿ. ಶಾರದಾ ಲಿಂಗೇಗೌಡ, ಪ್ರಕಾಶ್‌ ಅಯ್ಯರ್, ಗುರುಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರಕವಿ ಕುವೆಂಪು ಡಾ.ಸಿ. ಅಶ್ವಥ್‌ ಅವರ ‘ಜನ್ಮ ದಿನ ಅಂಗವಾಗಿ ಎಂದೆಂದಿಗೂ ನೀ ಕನ್ನಡವಾಗಿರು’ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸುಬ್ಬಣ್ಣ, ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ರಾಧಿಕಾ ರಾವ್, ಶ್ರೇಯಾ ಶ್ರೀನಿವಾಸ್‌, ಡೇವಿಡ್‌, ನಯನಾ ನಾಗರಾಜ್‌, ಸುಸ್ವರ ಸಂಗೀತ ಶಾಲೆಯ ಮಕ್ಕಳು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಹಾಡುವ ಮೂಲಕ ಜನರನ್ನು ಸಂಗೀತ ಲೋಕಕ್ಕೆ ಕರೆದೊಯ್ಯದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.