ADVERTISEMENT

ಸಾಧನೆಗೆ ಅಹಿಂಸಾ ಮಾರ್ಗವೇ ಸೂಕ್ತ

‘ಹುತಾತ್ಮರ ದಿನ’ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಎಸ್‌. ಶ್ರೀನಿವಾಸ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:15 IST
Last Updated 31 ಜನವರಿ 2017, 7:15 IST

ಮಂಡ್ಯ:ಯಾವುದೇ ಸಾಧನೆ ಮಾಡಬೇಕಾದರೆ ಅದು ಶಾಂತಿ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಸಾಧ್ಯ ಎಂಬುದನ್ನು ಮಹಾತ್ಮ ಗಾಂಧಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ಸಾಹಿತಿ ಎಸ್‌. ಶ್ರೀನಿವಾಸ ಶೆಟ್ಟಿ ಹೇಳಿದರು.

ನಗರದ ವಿಬ್‌ಸಿಟಿಯಲ್ಲಿ ನೆಹರೂ ಯುವ ಕೇಂದ್ರ ವತಿಯಿಂದ ಸೋಮವಾರ ನಡೆದ ‘ಹುತಾತ್ಮರ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೌನ ಮತ್ತು ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬ ಸಾರ ಅರಿತಿದ್ದ  ಗಾಂಧಿ ಅವರನ್ನು ಅಹಿಂಸೆ ಯಿಂದಲೇ ಸ್ವಾತಂತ್ರ್ಯ ತಂದುಕೊಟ್ಟ ಒಬ್ಬ ಮಹಾನ್‌ ಸಂತ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಗಾಂಧೀಜಿ ಅವರು ಸ್ವಂತ ಅನುಭವದಿಂದಲೇ ಉತ್ತಮ ಪಾಠ ಕಲಿತರು. ನಂತರ ತಂದೆ, ತಾಯಿ ಹಾಗೂ ಶಿಕ್ಷಕರು ಕಲಿಸಿಕೊಟ್ಟ ಸಂಸ್ಕಾರದಿಂದ ಜನಮಾನಸರಾದರು. ಏನನ್ನಾದರೂ ಸಾಧಿಸಬೇಕಾದರೆ ಶಾಂತಿ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಸಾಧ್ಯ ಎಂಬುದನ್ನು ವಿಶ್ವಕ್ಕೇ ತೋರಿಸಿಕೊಟ್ಟರು ಎಂದು ಸ್ಮರಿಸಿದರು.

ಪ್ರೀತಿಯಿಂದ ಜನರನ್ನು ಗೆಲ್ಲಬೇಕು. ಬದಲಿಗೆ ವೈರತ್ವದಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿ ದ್ದರು. ಸತ್ಯವನ್ನೇ ನುಡಿಯುತ್ತಾ ಇತರರಿಗೂ ಮಾದರಿಯಾದ ಗಾಂಧಿ ತತ್ವಗಳು ಇಂದಿನ ಯುವ ಪೀಳಿಗೆಗೆ ಸಹಕಾರಿಯಾಗಿದೆ. ಅದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಭಗವಾನ್ ಬುದ್ಧ ಸಮಾಜ ಸಂಸ್ಥೆ ಅಧ್ಯಕ್ಷ ವೈ.ಎಸ್. ಸಿದ್ದರಾಜು ಅವರು ‘ಭಾರತ ದೇಶದ ಎಲ್ಲ ಜನತೆಯ  ಭಾವೈಕ್ಯ ಹಾಗೂ ಸೌಹಾರ್ಧಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂಬ ಪ್ರತಿಜ್ಞಾ ವಿಧಿಯನ್ನು ಶಿಬಿರಾರರ್ಥಿಗಳಿಗೆ ಬೋಧಿಸಿದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ, ವಿಬ್‌ಸಿಟಿ ನಿರ್ದೇಶಕ ಕೆ.ಎಸ್. ಬಸವರಾಜು, ವಿಕಸನ ಸಂಸ್ಥೆಯ ಮಹೇಶ್‌ಚಂದ್ರಗುರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.