ADVERTISEMENT

ಸಾಲದಲ್ಲಿ ದಾಖಲೆ ಬರೆದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:28 IST
Last Updated 15 ಜುಲೈ 2017, 6:28 IST

ಮಂಡ್ಯ: ‘ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡ ಳಿತ ಅವಧಿಯಲ್ಲಿ ₹ 1.33 ಲಕ್ಷ ಕೋಟಿ ಸಾಲ ಮಾಡಿ ದಾಖಲೆ ಬರೆದಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಾಲ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ’ ಎಂದು ಟೀಕಿಸಿದರು.

ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್‌)ಯಿಂದ ₹ 3,322 ಕೋಟಿ ಹಣವನ್ನು ರಾಜ್ಯಕ್ಕೆ ನೀಡಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ ಕೊಟ್ಟಿದ್ದ ಹಣಕ್ಕಿಂತ ಎರಡು ಪಟ್ಟು ಹೆಚ್ಚು ಹಣ ರಾಜ್ಯಕ್ಕೆ ಸಿಕ್ಕಿದೆ. 2020ರವೇಳೆಗೆ ₹ 2.30 ಲಕ್ಷ ಕೋಟಿ ಹಣ  ರಾಜ್ಯಕ್ಕೆ ಹರಿದು ಬರಲಿದೆ. ಕಾಂಗ್ರೆಸ್‌ ಮುಖಂಡರು ಪೂರ್ವಾಗ್ರಹ ಪೀಡಿತರಾಗಿ, ಕೇಂದ್ರ ಅನುದಾನ ನೀಡಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಒಂದು ಕಡೆ ಕಾವೇರಿ ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡುತ್ತಿದೆ. ಇನ್ನೊಂದೆಡೆ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದ್ದು ಗಂಭೀರ ಅಪರಾಧ ಆರೋಪ ಇರುವ ವ್ಯಕ್ತಿಗಳಿಗೆ ರಕ್ಷಣೆ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಕೇವಲ ₹ 50 ಸಾವಿರ ಸಾಲ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಕಡೆಗೆ ಕೈತೋರಿಸುವ ರಾಜ್ಯ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಉತ್ತರ ಪ್ರದೇಶ, ಪಂಜಾಬ್‌, ಮಹಾರಾಷ್ಟ್ರ ಮಾದರಿಯಲ್ಲಿ ಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲ ಇರುವ ಎಲ್ಲಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುವುದು ಅಸಾಧ್ಯ’ ಎಂದು ಹೇಳಿದರು.

‘ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸಿ ಉಡುಪಿಯ ಪೇಜಾವರ ಶ್ರೀಗಳು ಮೂಲ ನಂಬಿಕೆಗೆ ಅನುಗುಣವಾಗಿ ವರ್ತಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ದೇವರುಗಳನ್ನು ಮಾನ್ಯ ಮಾಡಲಾಗುತ್ತದೆ. ಉಳಿದ ಧರ್ಮಗಳು ಇದನ್ನು ಅರ್ಥ ಮಾಡಿ ಕೊಳ್ಳಬೇಕು. ಒಬ್ಬನು ಮಾತ್ರ ನಮ್ಮ ದೇವರು ಎಂದುಕೊಂಡಾಗ ಧಾರ್ಮಿಕ ಸಂಘರ್ಷ ಏರ್ಪಡುತ್ತದೆ’ ಎಂದರು.

‘ಡಾ.ಪ್ರಭಾಕರ್‌ ಭಟ್‌ ಕಲ್ಲಡ್ಕ ಒಬ್ಬ ದೇಶಭಕ್ತ. ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡುಪಾಗಿಟ್ಟಿರುವ ಅವರ ಮೇಲೆ ಸಲ್ಲದ ಆರೋಪ ಮಾಡಿದರೆ ಅದನ್ನು ನಾಗರಿಕ ಸಮಾಜ ಕ್ಷಮಿಸುವುದಿಲ್ಲ. ಅವರನ್ನು ಬಂಧಿಸಿದರೆ ಮುಂದಾಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ಪರಪ್ಪನ ಅಗ್ರಹಾರದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ಅರಿವಿಗೆ ಬಾರದೆ ವಿಐಪಿ ಕೈದಿಗಳು ರಾಜಾರೋಷವಾಗಿ ಇರಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್‌, ಮುಖಂಡರಾದ ಸುರೇಶ್‌ ಬಾಬು, ದೇವರಾಜ್‌, ಲಕ್ಷ್ಮಣ್‌, ಎಚ್‌.ಆರ್‌. ಅರವಿಂದ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.