ADVERTISEMENT

ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 7:22 IST
Last Updated 12 ಜುಲೈ 2017, 7:22 IST

ಮಂಡ್ಯ: ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾದ ಅಂತಿಮ ವಿಚಾರಣೆ ಸಂಬಂಧ ಯಾವುದೇ ಆದೇಶ ಹೊರಬರದ ಹಿನ್ನೆಲೆಯಲ್ಲಿ ನಗರದಲ್ಲಿ ಕೈಗೊಳ್ಳಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಲಾಯಿತು.

ಮಂಗಳವಾರ ಬೆಳಿಗ್ಗೆಯೇ ವಿ.ವಿ ರಸ್ತೆ, ಆರ್‌.ಪಿ ರಸ್ತೆಗಳಲ್ಲಿ ಪೊಲೀಸರು ಪರೇಡ್‌ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಕಣ್ಗಾವಲು ಇತ್ತು.

ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಒಂದು ಪೊಲೀಸ್‌ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಧ್ಯಾಹ್ನವಾಗು ತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಪೊಲೀಸ್‌ ಭದ್ರತೆಯಲ್ಲಿ ಕಡಿತಗೊಳಿಸಲಾಯಿತು.

ADVERTISEMENT

‘ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಕೆಲದಿನಗಳವರೆಗೆ ವಿಚಾರಣೆ ನಡೆಯುತ್ತದೆ. ನಂತರ ಆದೇಶ ಬರುವ ನಿರೀಕ್ಷೆ ಇದೆ. ಹೀಗಾಗಿ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಅವಶ್ಯಕತೆ ಇರುವಷ್ಟು ಪೊಲೀಸ್‌ ತುಕಡಿಗಳನ್ನು ಭದ್ರತಾ ಕೆಲಸಕ್ಕೆ ನಿಯೋಜನೆ ಮಾಡಲಾಗುವುದು.

ಮಿಕ್ಕ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಲಾಗುವುದು. ಆದರೆ ವಿಚಾರಣೆಯ ಹಂತದಲ್ಲಿ ಯಾವುದೇ ಆದೇಶ ಹೊರಬರುವ ಕಾರಣ ಕಟ್ಟೆಚ್ಚರ ವಹಿಸಲಾಗುವುದು. ಕೆಆರ್‌ಎಸ್‌ ಜಲಾಶಯದಲ್ಲಿ ಭದ್ರತೆ ಮುಂದುವರಿಯುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

ಸರ್ಪಗಾವಲು
ಶ್ರೀರಂಗಪಟ್ಟಣ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣ ಹಾಗೂ ಸಮೀಪದ ಗ್ರಾಮಗಳಲ್ಲಿ ಪಥ ಸಂಚಲನ ನಡೆಸಿದರು.

ಪಟ್ಟಣದ ಪೇಟೆ ಬೀದಿ, ಗೋಸೇಗೌಡರ ಬೀದಿ, ಬಸ್‌ ನಿಲ್ದಾಣ ವೃತ್ತ, ಕುವೆಂಪು ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ತಾಲ್ಲೂಕಿನ ಬಾಬುರಾಯಕೊಪ್ಪಲು ಹಾಗೂ ಕಿರಂಗೂರು ಗ್ರಾಮಗಳಲ್ಲಿ ಪಥ ಸಂಚಲನ ನಡೆಯಿತು. 3 ಡಿಎಆರ್‌ ತುಕಡಿ, ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಎಎಸ್ಪಿ ಮತ್ತು ಸ್ಥಳೀಯ ಅಧಿಕಾರಿಗಳು ಕೂಡ ಪಥ ಸಂಚಲನದಲ್ಲಿದ್ದರು.

‘ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪಟ್ಟಣ ಹಾಗೂ ಕೆಆರ್‌ಎಸ್‌ ಆಸುಪಾಸಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ನಡೆಸಲಾಗಿದೆ‘ ಎಂದು ಸಿಪಿಐ ಎಂ. ಚಂದ್ರಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.