ADVERTISEMENT

ಸ್ವಚ್ಛತಾ ಆಂದೋಲನಕ್ಕೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 5:57 IST
Last Updated 2 ಅಕ್ಟೋಬರ್ 2014, 5:57 IST

ಮಂಡ್ಯ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಅ. 2ರಿಂದ ಸ್ವಚ್ಛತಾ ಆಂದೋಲನ ಮಾಸಾಚರಣೆಯನ್ನು ಸಾಂಕೇತಿಕವಾಗಿ ಉದ್ಘಾಟಿಸುವುದರ ಮೂಲಕ, ಒಂದು ತಿಂಗಳ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಪರಮೇಶ್ ಹೇಳಿದರು.

ನಗರದ ಜಿ.ಪಂ. ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿಮಟ್ಟದಲ್ಲಿ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ತಾ.ಪಂ. ಸದಸ್ಯರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ಭಾರತ ನಿರ್ಮಾಣ ಸ್ವಯಂ ಸೇವಕರುಗಳ ಸಹಕಾರದೊಂದಿಗೆ ಸ್ವಚ್ಛತಾ ಆಂದೋಲನ ಮಾಸಾಚರಣೆಯನ್ನು ಆಚರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಒಂದು ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಈಗಾಗಲೇ 55,255 ಇ–ಎನ್‌.ಎಂ.ಆರ್‌.ಗಳನ್ನು ಸೃಜಿಸಲಾಗಿದ್ದು, ಇದರಲ್ಲಿ 24,995 ಶೌಚಾಲಯಗಳು ಪೂರ್ಣ ಗೊಂಡಿವೆ ಎಂದರು.

ಗಾಂಧಿ ಜಯಂತಿಯ ಪ್ರಯುಕ್ತ ಶೌಚಾಲಯ ನಿರ್ಮಾಣ ಆಂದೋಲನ ಮಾಡುತ್ತಿರುವ ಕುರಿತು ವಿಶೇಷ ಗ್ರಾಮಸಭೆಯನ್ನು ನಡೆಸುವುದು, ಜಿಲ್ಲೆಯ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ.

ಅರ್ಜಿ ನೀಡಿದ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿ ಶೌಚಾಲಯ ನಿರ್ಮಿಸಿಕೊಳ್ಳಲು ಚಾಲನೆ ನೀಡುವುದು. ಪೂರ್ಣಗೊಂಡ ಶೌಚಾಲಯಗಳಿಗೆ ಅನುದಾನ ಪಾವತಿ ಅಭಿಯಾನವನ್ನು ಹಮ್ಮಿಕೊಳ್ಳುವುದು. 2014–15ನೇ ಸಾಲಿಗೆ ಜಿಲ್ಲೆಯ ಶೇ 50ರಷ್ಟು ಗ್ರಾ.ಪಂ.ಗಳನ್ನು ಸಂಪೂರ್ಣ ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮ ಪಂಚಾಯಿತಿಗಳಾಗಿಸಿ, ಕೇಂದ್ರ ಸರ್ಕಾರ ನೀಡುವ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆಯಲು ಅರ್ಹವಾಗುವಂತೆ ಸಜ್ಜುಗೊಳಿಸುವುದು ಸೇರಿದಂತೆ ಇತರೆ ವಿಷಯಗಳು ಅಭಿಯಾನದಲ್ಲಿ ಸೇರಿವೆ ಎಂದು ತಿಳಿಸಿದರು. ಜಿ.ಪಂ. ಸಿಇಒ ರೋಹಿಣಿ ಸಿಂಧೂರಿ, ಉಪ ಕಾರ್ಯದರ್ಶಿ ಎನ್‌.ಡಿ. ಪ್ರಕಾಶ್‌ ಹಾಜರಿದ್ದರು.

ಮೇಲುಕೋಟೆಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ
ಮೇಲುಕೋಟೆ: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಜಯಂತಿಯ ಅಂಗವಾಗಿ ಮೇಲುಕೋಟೆಯಲ್ಲಿ ಗುರುವಾರದಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

ಸ್ವಚ್ಛತಾ ಆಂದೋಲನದ  ಆರಂಭದ ಅಂಗವಾಗಿ ಎಸ್.ಇ.ಟಿ. ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ  ಸಹಕಾರದಲ್ಲಿ ಇಲ್ಲಿನ ಭವ್ಯ ಸ್ಮಾರಕಗಳಾದ ಭುವನೇಶ್ವರಿ ಮಂಟಪ, ಕಲ್ಯಾಣಿ, ಅಕ್ಕತಂಗಿಕೊಳ, ರಾಯಗೋಪುರ ಪರಿಸರ ಮತ್ತು ಪಟ್ಟಣದ ಪ್ರಮುಖ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನಮ್ಮ ಪೌರಕಾರ್ಮಿಕರು ಮತ್ತು ನಾಗರಿಕರೂ ಕಾಲೇಜಿನ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಸಹ ಈ ಕಾರ್ಯದಲ್ಲಿ ಭಾಗಿಯಾಗುತ್ತಿದ್ದು ಇನ್ನು ಮುಂದೆ ಪರಿಸರ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಎಂದರು

ಪ್ರತ್ಯೇಕ ಸಿಬ್ಬಂದಿ ನೇಮಕ:  ಪ್ರಖ್ಯಾತವಾದ ಪ್ರವಾಸಿ ಕೇಂದ್ರ ಮೇಲುಕೋಟೆಯನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ನಿರ್ಧಿರಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ತಿಳಿಸಿದ್ಧಾರೆ. 

‘ಪ್ರಜಾವಾಣಿ’ಯಲ್ಲಿ ಈಚೆಗೆ ವರದಿ ಮಾಡಿದ್ದರ ಬಗ್ಗೆ ನಾವೀಗಾಗಲೇ ಅವಲೋಕನ ಮಾಡಿದ್ದೇವೆ. ಮಹಾತ್ಮ ಗಾಂಧೀಜಿ ಅವರ ಜಯಂತಿಯ ದಿನದಿಂದ ಭವ್ಯ ಸ್ಮಾರಕಗಳಾದ ರಾಯಗೋಪುರ, ಕಲ್ಯಾಣಿ, ಅಕ್ಕತಂಗಿಕೊಳ, ಚೆಲುವನಾರಾಯಣಸ್ವಾಮಿ ದೇಗುಲದ ಆವರಣ, ಯೋಗನರಸಿಂಹಸ್ವಾಮಿ ಬೆಟ್ಟದ ತಳಭಾಗದ ಪರಿಸರ ಸ್ವಚ್ಛತೆಗಾಗಿ ಪ್ರತ್ಯೇಕ ಪೌರಕಾರ್ಮಿಕರನ್ನು ನೇಮಿಸುತ್ತಿದ್ದೇವೆ. ಇವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಪರಿಸರವನ್ನು ನಿರಂತರವಾಗಿ ಸ್ವಚ್ಛವಾಗಿಡಲು ಶ್ರಮಿಸಲಿದ್ದಾರೆ ಎಂದರು.

ಮೇಲುಕೋಟೆ ಪ್ರಮುಖ ಬೀದಿಗಳನ್ನು ನಿರಂತರವಾಗಿ ಸ್ವಚ್ಛತೆಯಿಂದಿಡಲು ಪ್ರತ್ಯೇಕ ಕ್ರಮ ಅನುಸರಿಸಲು ಯೋಚಿಸಿದ್ದೇವೆ. ಸ್ವಚ್ಛ ಹಾಗೂ ಸುಂದರ ಮೇಲುಕೋಟೆಯ ನಿರ್ವಹಣೆಯ ನಮ್ಮ ಈ ಕಾರ್ಯಕ್ಕೆ, ಜಿಲ್ಲಾ ಪಂಚಾಯಿತಿ, ದೇವಾಲಯದ ಆಡಳಿತ ಮತ್ತು ಪ್ರಾಚ್ಯವಸ್ತು ಇಲಾಖೆ ಮತ್ತು ಜಿಲ್ಲಾಡಳಿತ ಸಹಕಾರ ನೀಡಲು ಕೋರಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT