ADVERTISEMENT

ಹಸಿರಿನ ಮಡಿಲಲ್ಲಿ ಅರಳಿದ ಸರ್ಕಾರಿ ಶಾಲೆ

ಬಿ.ಎ.ಮಧುಕುಮಾರ
Published 12 ಸೆಪ್ಟೆಂಬರ್ 2017, 8:22 IST
Last Updated 12 ಸೆಪ್ಟೆಂಬರ್ 2017, 8:22 IST
ಕೊಪ್ಪ ಸಮೀಪದ ಹಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಾಯಕದಲ್ಲಿ ತೊಡಗಿರುವ ದೃಶ್ಯ
ಕೊಪ್ಪ ಸಮೀಪದ ಹಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಾಯಕದಲ್ಲಿ ತೊಡಗಿರುವ ದೃಶ್ಯ   

ಕೊಪ್ಪ: ಸಮೀಪದ ಹಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರಿನಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಆಕರ್ಷಿಸುತ್ತಿದೆ. ನಿತ್ಯ ವಿದ್ಯಾರ್ಥಿಗಳಿಗೆ ರುಚಿಕರವಾದ ಊಟದ ಜತೆಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.

1944ರಲ್ಲಿ ಸ್ಥಾಪಸಲಾದ ಈ ಶಾಲೆಯಲ್ಲಿ 76 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆ ಒಂದು ಎಕರೆ ಪ್ರದೇಶದಲ್ಲಿ ಇದೆ. ಶಾಲೆಯ ಆವರಣದಲ್ಲಿ ನೆಲ್ಲಿ, ಸೀಬೆ, ತೆಂಗು, ನೇರಳೆ, ಬಾಳೆ, ತೇಗ, ಬೇವು, ಕಾಡು ಬಾದಾಮಿ, ಮಾವು, ನಿಂಬೆ, ನುಗ್ಗೆ, ಸಿಲ್ವರ್‌, ತುರುಬೇವು, ಕರಿ ಬೇವು, ಹತ್ತಿಯ ಮರ ಗಿಡಗಳಿವೆ. ಮಲ್ಲಿಗೆ, ದಾಸವಾಳ, ಕನಕಾಂಬರ, ಕಣಗಿಲೆ, ಕಾಕಡ ಸೇರಿ ಹಲವು ಬಗೆಯ ಹೂವುಗಳು ಶಾಲೆಯ ತೋಟಕ್ಕೆ ಮರುಗು ನೀಡಿವೆ.

ನಲಿಕಲಿ ಮಕ್ಕಳಿಗೆ ತಟ್ಟೆ ಮಾದರಿಯಲ್ಲಿ ಟೇಬಲ್‌ ಮತ್ತು ಕುರ್ಚಿ ವ್ಯವಸ್ಥೆ ಮಾಡಲಾಗಿದೆ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಶಾಲೆಗೆ ತಟ್ಟೆ ಲೋಟಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಎಸ್‌.ಡಿ.ಎಂ.ಸಿ. ಆಡಳಿತ ಮಂಡಳಿಯ ಸದಸ್ಯರು ಶಾಲೆಗೆ ಶಾಮಿಯಾನ, ಟೇಬಲ್‌ ಮತ್ತು ಕುರ್ಚಿ ನೀಡಿದ್ದಾರೆ. 2015ರಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಇನ್‌ ಸ್ಪೈರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 2014ರ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಶಿಕ್ಷಕ ಶಿವಲಿಂಗಚಾರಿ ಮಾರ್ಗದರ್ಶನದಲ್ಲಿ ಮಕ್ಕಳೇ ಅಭಿನಯಿಸಿರುವ ಸಂಪೂರ್ಣ ರಾಮಾಯಣ ನಾಟಕ ನಾಗರಿಕರ ಮನ ಗೆದ್ದಿದೆ.

ADVERTISEMENT

ಶಾಲೆಯ ಆವರಣದಲ್ಲಿ ಮೂರು ಓದುವ ಕಟ್ಟೆ ನಿರ್ಮಾಣ ಮಾಡಲಾಗಿದ್ದು, ನಿತ್ಯ 5 ಗಂಟೆಯವರೆಗೆ ಅಲ್ಲಿ ವಿಶೇಷ ತರಗತಿ ನಡೆಯುತ್ತವೆ. ಶಾಲೆಯ ಕಾಯಂ ಶಿಕ್ಷಕರು ಗೌರವ ಶಿಕ್ಷಕರಾಗಿ ಪದವೀಧರ ಎಂ.ನಾಗರಾಜು ಅವರನ್ನು ನೇಮಕ ಮಾಡಿಕೊಂಡು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ್ದಾರೆ.

‘ಶಾಲೆಯಲ್ಲಿರುವ 7 ಕೊಠಡಿಗಳ ಪೈಕಿ 5 ಶಿಥಿಲಗೊಂಡಿವೆ. ತಕ್ಷಣ ಹಿರಿಯ ಅಧಿಕಾರಿಗಳು ಗಮನಹರಿಸಿ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಬೇಕು. ಬೆಕ್ಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎನ್ನುತ್ತಾರೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಎನ್‌. ಸಂತೋಷ್‌.

ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು, ಎಸ್‌.ಡಿ.ಎಂ.ಸಿ ಸದಸ್ಯರು ಮತ್ತು ಹಳೇ ವಿದ್ಯಾರ್ಥಿಗಳಿಂದ ಅಗತ್ಯ ಸಹಕಾರ ದೊರೆಯುತ್ತಿದೆ. ಬೇಸಿಗೆಯಲ್ಲೂ ಸಸಿಗಳನ್ನು ಪೋಷಿಸುವ ಕಾರ್ಯ ನಡೆಯುತ್ತಿದೆ. ಮಕ್ಕಳಿಗೆ ನಾಟಕ, ಕವಿತೆ, ರಂಗಕಲೆ ಕಲಿಸುವ ಕಾರ್ಯು ನಿರಂತರವಾಗಿ ನಡೆಯುತ್ತಿದೆ’ ಎಂದು ಶಿಕ್ಷಕರಾದ ಶಿವಲಿಂಗಚಾರಿ, ಎಸ್‌., ಸುರೇಶ್‌ಬಾಬು, ಬೃಂದಾಮಣಿ, ಎಸ್‌. ಅಶ್ವಿನಿ, ಶಾಸ್ತ್ರಿ, ಗ್ರಾಮದ ಯಜನಮಾನ ನಿಂಗರಾಜು ಹೇಳಿದರು.

‘ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಸಮುದಾಯ ಮತ್ತು ಶಿಕ್ಷಕರ ಸಹಕಾರದಿಂದ ತಾಲ್ಲೂಕಿನಲ್ಲಿ ಈ ಶಾಲೆ ಉತ್ತಮ ಹೆಸರುಗಳಿಸಿದೆ’ಎಂದು ಸಿ.ಆರ್‌.ಪಿ ಕೆ.ಎಸ್‌.ಎಲ್‌. ಶಾಸ್ತ್ರಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.