ADVERTISEMENT

ಹುಟ್ಟೂರಿನ ನೆರವಿಗೆ ಬಂದ ಅಧಿಕಾರಿ

ಹುಟ್ಟೂರಿನ ಋಣ ತೀರಿಸಲು ಮುಂದಾದ ಅಧಿಕಾರಿ: ಕೆರೆಯಲ್ಲಿ ಬಂತು ನೀರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:08 IST
Last Updated 23 ಮಾರ್ಚ್ 2017, 6:08 IST
ಮಳವಳ್ಳಿ ತಾಲ್ಲೂಕಿನ ಯತ್ತಂಬಾಡಿಯಲ್ಲಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಯಿಸಿ ಹೊನ್ನಪ್ಪನ ಕಟ್ಟೆಗೆ ನೀರು ತುಂಬಿಸಿರುವುದು.
ಮಳವಳ್ಳಿ ತಾಲ್ಲೂಕಿನ ಯತ್ತಂಬಾಡಿಯಲ್ಲಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಯಿಸಿ ಹೊನ್ನಪ್ಪನ ಕಟ್ಟೆಗೆ ನೀರು ತುಂಬಿಸಿರುವುದು.   

ಮಳವಳ್ಳಿ: ಹುಟ್ಟಿದ ಊರಿನ ಋಣ ತೀರಿಸಲು ಮುಂದಾದ ಅಧಿಕಾರಿಯೊಬ್ಬರು ಮಳವಳ್ಳಿ ತಾಲ್ಲೂಕಿನ ಯತ್ತಂಬಾಡಿಯ ಹೊನ್ನಪ್ಪನ ಕಟ್ಟೆಗೆ ನೀರು ತುಂಬಿಸುವ ಔದಾರ್ಯ ಮೆರೆದಿದ್ದಾರೆ.

ಗ್ರಾಮದ ಸಮೀಪವೇ ಶಿಂಷಾ ನದಿ ಇದ್ದದ್ದರಿಂದ ನೀರಿನ ಬವಣೆ ಎದುರಾಗಿರಲಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಮಳೆಯಾಗದಿರುವುದರಿಂದ ಶಿಂಷಾ ನದಿಯೂ ನೀರಿಲ್ಲದೇ ಬತ್ತಿ ಹೋಗಿದೆ. ಗ್ರಾಮದ ಕಟ್ಟೆಯೂ ಸಂಪೂರ್ಣ ಒಣಗಿತ್ತು.

ಗ್ರಾಮದ ಸ್ಥಿತಿ ಕಂಡ ಅಧಿಕಾರಿಯಾಗಿರುವ ಕಾಳಯ್ಯ ಎಂಬುವವರು ಕೆರೆಯ ಪಕ್ಕದಲ್ಲಿಯೇ ಕೊಳವೆ ಬಾವಿ ಕೊರೆಯಿಸಿದ್ದಾರೆ. ಅದರಿಂದ ಕೆರೆ ತುಂಬಿಸಿದ್ದು, ಜಾನುವಾರುಗಳಿಗೆ ಬಹಳ ಉಪಯೋಗವಾಗಿದೆ.

ಹಸು, ಎಮ್ಮೆ, ಕುರಿ, ಮೇಕೆ ಮೇಯಿಸಲು ಹೋಗುವಾಗ ಮತ್ತು ವಾಪಸ್ ಹೊಡೆದುಕೊಂಡು ಬರುವಾಗ ಕೆರೆಯಲ್ಲಿ ನೀರು ಕುಡಿಸಿಕೊಂಡು ಹೋಗುತ್ತಿದ್ದಾರೆ. ಕೊಳವೆಬಾವಿ ಹಾಕಿಸಿದವರನ್ನು ನೆನೆದುಕೊಳ್ಳುತ್ತಿದ್ದಾರೆ. ಕೆರೆಯಲ್ಲಿ ನೀರು ಬಂದಿರುವುದರಿಂದ ಅಕ್ಕ–ಪಕ್ಕದ ಕೊಳವೆಬಾವಿಗಳಲ್ಲಿಯೂ ಅಂತರ್ಜಲ ವೃದ್ಧಿಯಾಗಿದೆ.

‘ನದಿ ಪಕ್ಕದಲ್ಲಿದ್ದರೂ ದನಗಳಿಗೆ ನೀರಿಲ್ಲದೇ ಪರದಾಡುವಂತಾಗಿತ್ತು. ಈಗ ನಾವು ನೀರಿಗೆ ಪರದಾಡುವಂತಾಗಿದೆ. ನಮಗೆ ಕುಡಿಯಲು ನೀರು ಸಿಗುತ್ತಿದೆ. ಆದರೆ, ಜಾನುವಾರುಗಳಿಗೆ ನೀರಿಲ್ಲದ ಬವಣೆ ಎದುರಾಗಿತ್ತು. ಕಾಳಯ್ಯ ಅವರು ಕೊಳವೆಬಾವಿ ಕೊರೆಯಿಸಿ ಕಟ್ಟೆಗೆ ನೀರು ಹರಿಸಿದ್ದು ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮದ ಚಿಕ್ಕಣ್ಣ.

‘ಅಪರೂಪಕ್ಕೊಮ್ಮೆ ಗ್ರಾಮಕ್ಕೆ ಹೋಗುತ್ತೇನೆ. ಕೆಲವು ದಿನಗಳ ಹಿಂದೆ ಹೋಗಿದ್ದಾಗ ನೀರಿನ ಬವಣೆ ಅರಿತು ಕೊಳವೆಬಾವಿ ಕೊರೆಯಿಸಿದ್ದೇನೆ. ಇದು ನನ್ನ ಹುಟ್ಟೂರಿಗೆ ಮಾಡಿದ ಒಂದು ಅಳಿಲು ಸೇವೆ’ ಎನ್ನುತ್ತಾರೆ ಅಧಿಕಾರಿ ಕಾಳಯ್ಯ.
-ಎನ್‌.ಪುಟ್ಟಸ್ವಾಮಾರಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.