ADVERTISEMENT

₹ 15.67 ಕೋಟಿ ಪರಿಹಾರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:18 IST
Last Updated 31 ಡಿಸೆಂಬರ್ 2016, 5:18 IST

ಮಳವಳ್ಳಿ: ತಾಲ್ಲೂಕಿನಲ್ಲಿ ಬೆಳೆ ಹಾನಿ ಪರಿಹಾರ ಕಾರ್ಯಗಳಿಗೆ ₹ 15.67 ಕೋಟಿ ಬೆಳೆ ಪರಿಹಾರ ಕೋರಿ ಬೇಡಿಕೆ ಮಂಡಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್‌.ಎನ್‌.ವಿಶ್ವಾಸ್‌ ಶುಕ್ರವಾರ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಗೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಡಿ.ಪರಮೇಶ್‌, ‘ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಪ್ರಸ್ತುತ ದಿನಗಳವರಗೆ ನಷ್ಟ ಆಧರಿಸಿ ₹ 15.67 ಕೋಟಿ ಪರಿಹಾರಕ್ಕೆ ಬೇಡಿಕೆ ನೀಡಲಾಗುವುದು. ಬರುವ ಅನುದಾನ ಆಧರಿಸಿ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ವಿವರಿಸಿದರು.

ಉಳಿದಂತೆ ಸಭೆಯಲ್ಲಿ ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ವಿದ್ಯುತ್ ಕೊರತೆ ವಿಷಯಗಳು ಪ್ರಮುಖವಾಗಿ ಚರ್ಚೆಯಾದವು.
ಸದಸ್ಯ ನಟೇಶ್‌ ಅವರು ಕೆಲವರ ಜಮೀನಿನ ಖಾತೆ ಬದಲಾಗದೆ ಇದ್ದು ಅಂತಹವರಿಗೆ ಪರಿಹಾರ ನೀಡುವ ಬಗ್ಗೆ ಗಮನ ನೀಡಿ ಎಂದರು.

ಇದನ್ನು ಬೆಂಬಲಿಸಿದ ಸದಸ್ಯ ಪುಟ್ಟಸ್ವಾಮಿ, ಈ ಬಗ್ಗೆ ಸಣ್ಣ ಪುಟ್ಟ ಗೊಂದಲಗಳಿದ್ದು ಕಂದಾಯ ಇಲಾಖೆಯವರನ್ನು ಸಭೆಗೆ ಕರೆಸಿ ಎಂದು ಒತ್ತಾಯಿಸಿದರು.
ಫಸಲ್ ಭಿಮಾ: ಅಧಿಕಾರಿ ಪರಮೇಶ್‌ ಅವರು ತಾಲ್ಲೂಕಿನಲ್ಲಿ ಫಸಲ್‌ ಬಿಮಾ ಯೋಜನೆಯಡಿ 3 ಸಾವಿರ ರೈತರು ನೋಂದಾಯಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸದಸ್ಯ ಶಂಕರ್ ಅವರು ತಾಲ್ಲೂಕಿನ ಬ್ಯಾಡರಹಳ್ಳಿ, ಕರಲಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಮನ ಸೆಳೆದರು. ಸದಸ್ಯೆ ರಾಜೇಶ್ವರಿ ಹುಸ್ಕೂರು ಗ್ರಾಮದಲ್ಲಿ, ಸದಸ್ಯೆ ಶಿಲ್ಪ ಮಾದಹಳ್ಳಿ ಗ್ರಾಮ, ಗ್ರಾಪಂ ಅಧ್ಯಕ್ಷ ನಿಂಗಯ್ಯ ಅವರು ಧನಗೂರಿನಲ್ಲಿ, ಸದಸ್ಯೆ ರಾಜಣ್ಣ ಹಲಸಹಳ್ಳಿಯಲ್ಲಿ, ಸದಸ್ಯೆ ಸಗೀರಾ ಅಂಜುಂ ಕಿರುಗಾವಲಿನಲ್ಲಿ, ಸದಸ್ಯೆ ಸುಮಿತ್ರ ಚಿಕ್ಕಮುಲಗೂಡಿನಲ್ಲಿಯೂ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ನೀರಾವರಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜೋಷಿ, ಶೀಘ್ರ ಈ ಗ್ರಾಮಗಳಿಗೆ ಭೇಟಿ ನೀಡಿ ಕ್ರಮಕೈಗೊಳ್ಳಲಾಗುವುದು ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ತಾಲ್ಲೂಕಿನ ವ್ಯಾಪ್ತಿಯಲ್ಲಿ 73 ಸಾವಿರ ಜಾನುವಾರುಗಳಿವೆ. 13 ವಾರವರೆಗೆ ಮೇವು ಕೊರತೆ ಇಲ್ಲ’ ಎಂದರು.
ಸದಸ್ಯೆ ಸುಮನಾ,  ಬೆಳಕವಾಡಿ ಗ್ರಾಮದಲ್ಲಿ ಖಾಸಗಿ ಶಾಲೆಯೊಂದು ಹಳೆಯ ಕಟ್ಟಡದಲ್ಲಿ ನಡೆಯುತ್ತಿದೆ, 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ, ಸವಲತ್ತು ನೀಡಿಲ್ಲ ಎಂದು ಸಭೆಯ ಗಮನಸೆಳೆದರು.

ಬಿಇಒ ಅವರು ಇದಕ್ಕೆ ಮುಂದಿನ ಶೈಕ್ಷಣಿಕ ಅವಧಿಯೊಳಗೆ ಸರಿಪಡಿಸಿ ಕೊಳ್ಳಲು ಶಾಲೆಯ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯ ಪುಟ್ಟಸ್ವಾಮಿ, ಕೆಲ ಅಧಿಕಾರಿಗಳು ಪಕ್ಷ ತಾರತಮ್ಯ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧ್ಯಕ್ಷರು ಗಮನ ನೀಡಿ ಎಂದು ಒತ್ತಾಯಿಸಿದರು. ಉಪಾಧ್ಯಕ್ಷ ಮಾದು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಮಣಿಕಂಠ ವೇದಿಕೆಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.