ADVERTISEMENT

16ರಿಂದ ಮಕ್ಕಳ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 12:17 IST
Last Updated 15 ಜನವರಿ 2018, 12:17 IST

ಕೆ.ಆರ್.ಪೇಟೆ: ಸಂಕ್ರಾಂತಿಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ಮೊಟ್ಟ ಮೊದಲ ಬಾರಿಗೆ ಪಟ್ಟಣದಲ್ಲಿ ಜ. 16ರಿಂದ ಮೂರುದಿನ ಮಕ್ಕಳ ನಾಟಕೋತ್ಸವವನ್ನು ಶತಮಾನದ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದಯರವಿ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಕತ್ತರಘಟ್ಟ ವಾಸು ತಿಳಿಸಿದ್ದಾರೆ.

ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕತೆಯನ್ನು ಪ್ರದರ್ಶಿಸಿ ಅಭಿವ್ಯಕ್ತಗೊಳಿಸಲು ಅನುವಾಗುವಂತೆ ಮಾಡಲು ಉದಯರವಿ ಸೇವಾ ಟ್ರಸ್ಟ್ ಮತ್ತು ಶತಮಾನ ಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಾಲಾ ಉನ್ನತೀಕರಣ ಸಮಿತಿಯ ಆಶ್ರಯದಲ್ಲಿ ನಾಟಕೋತ್ಸವವನ್ನು ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 16ರ ಸಂಜೆ 6 ಘಂಟೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಲೋಕೇಶ್ ನಾಟಕೋತ್ಸವವನ್ನು ಉದ್ಘಾಟಿಸಲಿದ್ದು ಶಾಸಕ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ ಪಟ್ಟಣದ ಶತಮಾನ ಶಾಲೆಯ ಮಕ್ಕಳು ಮೈಸೂರು ಪ್ರಕಾಶ್ ನಿರ್ದೇಶನ ಹಾಗೂ ಬಿ.ವಿ.ಕಾರಂತ ಸಂಗೀತ ಸಂಯೋಜನೆಯ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ನಾಟಕವನ್ನು ಅಭಿನಯಿಸಲಿದ್ದಾರೆ.

ADVERTISEMENT

ಜ. 17ರಂದು ಸಂಜೆ 6ಕ್ಕೆ ಶೀಳನೆರೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಎಚ್.ಎಸ್.ವೆಂಕಟೇಶಮೂರ್ತಿ ರಚಿತ, ಕೆ.ಎಂ.ಕೀರ್ತಿರಾಜ್ ನಿರ್ದೇಶನದ ‘ಕಂಸಾಯಣ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಸಂಜೆ 7ಕ್ಕೆ ಪಟ್ಟಣದ ಗ್ರಾಮಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಜಾನನ ಶರ್ಮ ವಿರಚಿತ ಮಧು ಮಳವಳ್ಳಿ ನಿರ್ದೇಶಿಸುತ್ತಿರುವ ‘ನಾಣಿಭಟ್ಟನ ಸ್ವರ್ಗದ ಕನಸು’ ನಾಟಕವನ್ನು ಅಭಿನಯಿಸಲಿದ್ದಾರೆ.

ಜ. 18ರಂದು ಸಂಜೆ 6ಕ್ಕೆ ಅಕ್ಕಿಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರವೀಣ್ ಬೆಳ್ಳಿ ರಚಿಸಿ ನಿರ್ದೇಶಿಸುತ್ತಿರುವ ‘ಕಪ್ಪು-ಬಿಳುಪು’ ನಾಟಕ ಪ್ರದರ್ಶಿಲಿದ್ದಾರೆ. ಸಂಜೆ 7ಕ್ಕೆ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಡಾ.ಸಿದ್ದಲಿಂಗಯ್ಯ ವಿರಚಿತ ‘ಏಕಲವ್ಯ’ ನಾಟಕವನ್ನು ಅಭಿನಯಿಸಲಿದ್ದಾರೆ.

ನಂತರ ಜಿ.ಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನ್ನಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಉದಯರವಿ ಸೇವಾ ಟ್ರಸ್ಟ್‌ನ ಕೋಶಾಧ್ಯಕ್ಷ ಲೇಪಾಕ್ಷಿಗೌಡ, ಟ್ರಸ್ಟಿಗಳಾದ ಎಂ.ಕೆ.ಹರಿಚರಣತಿಲಕ್, ಶೀಳನೆರೆ ಶಿವಕುಮಾರ್, ರಾಜೇನಹಳ್ಳಿ ಪದ್ಮೇಶ್, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಸನ್ನ, ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.