ADVERTISEMENT

ಮೇಲುಕೋಟೆಯಲ್ಲಿ ಪುನರ್ವಸು ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 6:44 IST
Last Updated 1 ಫೆಬ್ರುವರಿ 2018, 6:44 IST

ಮೇಲುಕೋಟೆ: ಮೇಲುಕೋಟೆಯನ್ನು ದಿವ್ಯಕ್ಷೇತ್ರವಾಗಿ ಬೆಳಕಿಗೆ ತಂದ ಪ್ರತೀಕವಾಗಿ ನಡೆಯುವ ಪುನರ್ವಸು ಉತ್ಸವ ಮಂಗಳವಾರ ಸಡಗರ ಸಂಭ್ರಮದೊಂದಿಗೆ ನೆರವೇರಿತು.

ಕ್ರಿ.ಶ.1017 ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರ ದಿನ ಶಿಷ್ಯರೊಂದಿಗೆ ಯಾದವಾದ್ರಿ ಬೆಟ್ಟಕ್ಕೆ ಬಂದಿದ್ದ ರಾಮಾನುಜರು ಕಾಡಿನ ನಡುವೆಇದ್ದ ಹುತ್ತವನ್ನು ಕಲ್ಯಾಣಿ ತೀರ್ಥದಿಂದ ಕರಗಿಸಿ ಚೆಲುವನಾರಾಯಣನ ದರ್ಶನಪಡೆದ ಕಾರಣ ಪ್ರತಿ ವರ್ಷ ಶುಕ್ಲಪುನರ್ವಸು ನಕ್ಷತ್ರದ ದಿನ ಮಹೋತ್ಸವ ನೆರವೇರಿಸಲಾಗುತ್ತದೆ. ಈ ಬಾರಿ ಆಚಾರ್ಯರ ಸಹ್ರಮಾನೋತ್ಸವ ವರ್ಷದ ಸಂಭ್ರಮದ ಭಾಗವಾಗಿ ಮಂಗಳವಾರ ನೆರವೇರಿತು.

ಪುನರ್ವಸು ಉತ್ಸವದ ಅಂಗವಾಗಿ ಬೆಳಿಗ್ಗೆ 4.30ಕ್ಕೆ ರಾಮಾನುಜಾಚಾರ್ಯರಿಗೆ ವಿಶೇಷ ಆರಾಧನೆಯೊಂದಿಗೆ ಶ್ರದ್ಧಾಭಕ್ತಿಯಿಂದ ಅಭಿಷೇಕ ನೆರವೇರಿತು. ಬೆಳಿಗ್ಗೆ 7ರಿಂದ 10.30ರವರೆಗೆ ಕಲ್ಯಾಣಿಯಲ್ಲಿ ರಾಮಾನುಜರಿಗೆ ವಿಶೇಷ ಅಲಂಕಾರ ಮಾಡಿ ನಂತರ ನಿತ್ಯಪೂಜಾಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಆಚಾರ್ಯರ ಉತ್ಸವ ಮದ್ಯಾಹ್ನ 11ರ ವೇಳೆಗೆ ದಿವ್ಯಪ್ರಬಂಧ ಪಾರಾಯಣ, ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ತಲುಪಿತು. ಅಲ್ಲಿ ತಿರುನಾರಾಯಣಸ್ವಾಮಿಯ ಎದುರುಸೇವೆ ಕೈಂಕರ್ಯ ಮತ್ತು ಮಹಾಮಂಗಳಾರತಿ ನಡೆಯಿತು.

ADVERTISEMENT

ವಂಗೀಪುರಂ ತಿರುಮಾಳಿಗೆಯಿಂದ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಪಳಿಳಹ ಪಶಜತಹ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಮತ್ತು ಹೂವುಗಳನ್ನು ಸನ್ನಿಧಿಯ ಇಳೆಯಾಳ್ವಾರ್ ಸ್ವಾಮೀಜಿ ದಂಪತಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಹಣ್ಣುಗಳಿಂದ ಪಂಚಾಮೃತ ಮತ್ತು ಕಂದಂಬ ಸಕ್ಕರೆಪೊಂಗಲ್, ದದಿಯೋದನ ಪ್ರಸಾದಗಳನ್ನು ಭಕ್ತರಿಗೆ ವಿತರಣೆ ಮಾಡಲಾಯಿತು. ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.