ADVERTISEMENT

₹ 766 ಕೋಟಿ ಮೊತ್ತದ ಬಜೆಟ್‌

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:16 IST
Last Updated 13 ಏಪ್ರಿಲ್ 2017, 6:16 IST
ಮಂಡ್ಯದಲ್ಲಿ ಬುಧವಾರ ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಜೆ.ಪ್ರೇಮಕುಮಾರಿ ಅವರು ಬಜೆಟ್‌ ಮಂಡಿಸಿದರು
ಮಂಡ್ಯದಲ್ಲಿ ಬುಧವಾರ ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಜೆ.ಪ್ರೇಮಕುಮಾರಿ ಅವರು ಬಜೆಟ್‌ ಮಂಡಿಸಿದರು   

ಮಂಡ್ಯ:  ಜಿಲ್ಲಾ ಪಂಚಾಯಿತಿ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮ ಗಳ ಅನುಷ್ಠಾನಕ್ಕಾಗಿ ₹ 766.10 ಕೋಟಿ ಮೊತ್ತದ 2017-18ನೇ ಸಾಲಿನ ಬಜೆಟ್‌ ಅನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ. ಪ್ರೇಮಕುಮಾರಿ ಮಂಡಿಸಿದರು.

ನಗರದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಬಜೆಟ್‌ ಮಂಡಿಸಿದ ಅವರು, 2016-17ನೇ ಸಾಲಿನಲ್ಲಿ ₹ 747.35 ಕೋಟಿ ಮೊತ್ತದ ಬಜೆಟ್‌ ಮಂಡನೆ ಮಾಡಲಾಗಿತ್ತು. ಈ ವರ್ಷ ₹ 18.74 ಕೋಟಿ ಹೆಚ್ಚು ಅನುದಾನ ಲಭ್ಯವಾಗುವ ನಿರೀಕ್ಷೆ ಇದ್ದು, ಶೇ 2.5 ರಷ್ಟು ಹೆಚ್ಚು ಮೊತ್ತದ ಬಜೆಟ್‌ ಮಂಡನೆ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿಗೆ ನೇರವಾಗಿ ಆದಾಯವಿಲ್ಲದ ಕಾರಣ ಸರ್ಕಾರದಿಂದ ಬರುವ ಅನುದಾನವನ್ನು  ಯೋಜನೆ, ಯೋಜನೇತರ ಕಾರ್ಯಕ್ರಮಗಳಿಗೆ  ವಿಂಗಡಿಸಲಾಗಿದೆ. ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ.  ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಒಟ್ಟು ₹ 766.10 ಕೋಟಿ ಬಜೆಟ್ ಮೊತ್ತದಲ್ಲಿ ಜಿ.ಪಂ. ಕಾರ್ಯಕ್ರಮಗಳಿಗೆ ₹ 259.69 ಕೋಟಿ, ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ  ₹ 490.99 ಕೋಟಿ ಹಾಗೂ ಗ್ರಾ.ಪಂ. ಗಳಿಗೆ ₹ 25.41 ಕೋಟಿ ನಿಗದಿ ಮಾಡಲಾಗಿದೆ.

ಇಲಾಖಾವಾರು ಅನುದಾನ ವಿವರ: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಗಳಿಗಾಗಿ ₹ 65.06 ಕೋಟಿ, ಶಿಕ್ಷಣ ಇಲಾಖೆಗೆ ₹ 41.71 ಕೋಟಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ₹ 47.26 ಕೋಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ₹ 43.15 ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯಕ್ಕಾಗಿ ₹ 37.80 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹ 34.17 ಕೋಟಿ, ಪಶುಸಂಗೋಪನಾ ಇಲಾಖೆಗೆ ₹ 26.13 ಕೋಟಿ ತೆಗೆದಿರಿಸಲಾಗಿದೆ ಎಂದರು.

ಕುಟುಂಬ ಕಲ್ಯಾಣ ಇಲಾಖೆಗೆ ₹ 15.07 ಕೋಟಿ, ಕೃಷಿ ಇಲಾಖೆಗೆ ₹ 6.92 ಕೋಟಿ, ರೇಷ್ಮೆ ಇಲಾಖೆಗೆ ₹ 67.9 ಕೋಟಿ,  ತೋಟಗಾರಿಕೆ ಇಲಾಖೆಗೆ 58.2 ಕೋಟಿ, ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಕ್ಕೆ 44.8 ಕೋಟಿ,  ಆಯುಷ್ ಇಲಾಖೆಗೆ 36.4 ಕೋಟಿ, ಸಾಮಾಜಿಕ ಅರಣ್ಯ ಇಲಾಖೆಗೆ 33.8 ಕೋಟಿ, ಮೀನುಗಾರಿಕೆ ಇಲಾಖೆಗೆ 14.2 ಕೋಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 13.0 ಕೋಟಿ, ಗ್ರಾಮೀಣ ಮತ್ತು ಸಣ್ಣ ಉದ್ಯಮಗಳ ಅಭಿವೃದ್ಧಿಗಾಗಿ 0.86 ಕೋಟಿ, ಕೈಮಗ್ಗ ಮತ್ತು ಜವಳಿ ಇಲಾಖೆಗೆ 0.35 ಕೋಟಿ ಹಾಗೂ ಸಹಕಾರ ಇಲಾಖೆಗೆ 0.57 ಕೋಟಿ ನೀಡಲಾಗುತ್ತದೆ ಎಂದರು.

ಸ್ವಚ್ಛ ಭಾರತ್‌ ಮಿಷನ್‌ ಅಡಿ ₹ 70.40 ಕೋಟಿ, ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಹೇಳಿದರು.ಉಪಾಧ್ಯಕ್ಷೆ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಯೋಗೇಶ್‌, ಮಂಜುನಾಥ್‌, ಬೋರಯ್ಯ, ಸಿಇಒ ಬಿ. ಶರತ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.