ಶ್ರೀರಂಗಪಟ್ಟಣ: ಪಟ್ಟಣದ ಓಂ ಶ್ರೀನಿಕೇತನ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಇರಿಸಿದ್ದ ಬಗೆ ಬಗೆಯ ತಿನಿಸುಗಳು ನೋಡುಗರ ಬಾಯಿಯಲ್ಲಿ ನೀರೂರಿಸಿದವು.
ಆಹಾರ ಮೇಳದಲ್ಲಿ ಸಿಹಿ ತಿನಿಸುಗಳಾದ ರವೆ ಉಂಡೆ, ಜಿಲೇಬಿ, ಜಾಮೂನು, ಮೈಸೂರು ಪಾಕ್, ಮಿಠಾಯಿ, ಲಡ್ಡುಗಳನ್ನು ಇರಿಸಲಾಗಿತ್ತು. ವಿದ್ಯಾರ್ಥಿಗಳು ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಚುರುಮುರಿ, ಗೋಬಿ ಮಂಚೂರಿ, ಗೋಲ್‌ಗಪ್ಪ, ಮಸಾಲೆ ಪೂರಿಗಳನ್ನೂ ಇಟ್ಟಿದ್ದರು. ಹಣ್ಣುಗಳ ಪೈಕಿ ಗಂಜಾಂ ಅಂಜೂರ ಗಮನ ಸೆಳೆಯಿತು. ಪಪ್ಪಾಯಿ, ಕಲ್ಲಂಗಡಿ, ಅನಾನಸ್, ಸೀಬೆ, ಸಪೋಟ, ಸೇಬು ಹಣ್ಣುಗಳ ಈ ಮೇಳದಲ್ಲಿದ್ದವು. ಬಗೆ ಬಗೆಯ ಚಾಕೊಲೇಟ್, ಬಿಸ್ಕಿಟ್‌ಗಳು ಇದ್ದವು. ವಿದ್ಯಾರ್ಥಿಗಳು ತಂದಿದ್ದ ತಿನಿಸುಗಳನ್ನು ಮಾರಾಟ ಮಾಡಿ ಹಣ ಗಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅನಂತರಾಜು ಆಹಾರ ಮೇಳವನ್ನು ಉದ್ಘಾಟಿಸಿದರು. ಇಂತಹ ಮೇಳಗಳಿಂದ ಮಕ್ಕಳಿಗೆ ಆಹಾರದ ಕ್ರಮ ತಿಳಿಯುತ್ತದೆ. ಶುದ್ಧವಾದ ಮತ್ತು ಪೌಷ್ಠಿಕ ಆಹಾರ ಸೇವಿಸಬೇಕು ಎಂಬ ಅಂಶ ಕೂಡ ಅರಿವಿಗೆ ಬರುತ್ತದೆ. ವ್ಯಾಪಾರ, ವ್ಯವಹಾರ ಜ್ಞಾನವನ್ನೂ ತಿಳಿದುಕೊಳ್ಳಬಹುದು. ಹಾಗಾಗಿ ಪ್ರತಿ ಶಾಲೆಗಳಲ್ಲಿ, ವರ್ಷಕ್ಕೆ ಒಮ್ಮೆಯಾದರೂ ಇಂತಹ ಮೇಳಗಳು ನಡೆಯಬೇಕು ಎಂದು ಹೇಳಿದರು.
ಓಂ ಶ್ರೀನಿಕೇತನ ಟ್ರಸ್ಟ್‌ನ ಟ್ರಸ್ಟಿ ಆಶಾಲತಾ ಪುಟ್ಟೇಗೌಡ, ಕಸಾಪ ನಗರ ಘಟಕದ ಅಧ್ಯಕ್ಷೆ ಎನ್. ಸರಸ್ವತಿ, ಎಂಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವಿ. ನಾರಾಯಣ, ಮುಖ್ಯ ಶಿಕ್ಷಕ ಶಿವಕುಮಾರ್, ಸಂಕ್ರಾಂತಿ ಮಂಜುರಾಂ, ಬಿ.ಎಸ್. ಅನುಪಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.