ADVERTISEMENT

‘ಮಂಡ್ಯದ ನಯಾಗರ’ ಕೋಣನಹಳ್ಳಿ ಕೆರೆಯ ನಿರ್ಲಕ್ಷ್ಯ‌‌

ನೀರಿಗೆ ಸೇರುತ್ತಿದೆ ಹೋಟೆಲ್‌, ಕಲ್ಯಾಣ ಮಂಟಪಗಳ ತ್ಯಾಜ್ಯ, ಕಾಡುತ್ತಿದೆ ಒತ್ತುವರಿ ಸಮಸ್ಯೆ

ಎಂ.ಎನ್.ಯೋಗೇಶ್‌
Published 2 ಸೆಪ್ಟೆಂಬರ್ 2018, 12:16 IST
Last Updated 2 ಸೆಪ್ಟೆಂಬರ್ 2018, 12:16 IST
ಮಂಡ್ಯದ ಕಲ್ಲಹಳ್ಳಿ ಬಡಾವಣೆಗೆ ಹೊಂದಿಕೊಂಡಂತಿರುವ ಕೋಣನಹಳ್ಳಿ ಕೆರೆಯ ನೀರು ಸೇತುವೆಯ ಮೇಲಿನಿಂದ ಹರಿಯುತ್ತಿರುವುದು
ಮಂಡ್ಯದ ಕಲ್ಲಹಳ್ಳಿ ಬಡಾವಣೆಗೆ ಹೊಂದಿಕೊಂಡಂತಿರುವ ಕೋಣನಹಳ್ಳಿ ಕೆರೆಯ ನೀರು ಸೇತುವೆಯ ಮೇಲಿನಿಂದ ಹರಿಯುತ್ತಿರುವುದು   

ಮಂಡ್ಯ: ನಗರಕ್ಕೆ ಹೊಂದಿಕೊಂಡಂತಿರುವ ಕೋಣನಹಳ್ಳಿ ಕೆರೆ ಸೇತುವೆ ಮೇಲಿನಿಂದ ನೀರು ಹಾಲು ಚೆಲ್ಲಿದಂತೆ ಚೆಲ್ಲುತ್ತಿದೆ. ರಸ್ತೆ ಹಾಗೂ ರೈಲ್ವೆ ಹಳಿಯ ಸಮೀಪದಲ್ಲೇ ಇರುವ ಈ ಸೇತುವೆ ನೋಡುಗರ ಕಣ್ಮನ ಸೆಳೆಯುತ್ತಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಕೆರೆ ನಗರವಾಸಿಗಳ ವಿಹಾರ ತಾಣವಾಗಲು ಸಾಧ್ಯವಾಗಿಲ್ಲ.

50 ಅಡಿ ಉದ್ದದ ಸೇತುವೆಯ ಮೇಲಿಂದ ನೀರು ಬೀಳುತ್ತಿದೆ. ಇದನ್ನು ‘ಮಂಡ್ಯದ ನಯಾಗರ ಜಲಪಾತ’ ಎಂದರೂ ತಪ್ಪಲ್ಲ. ಕೋಣನೂರುಗ್ರಾಮ ಹಾಗೂ ನಗರದ ಕಲ್ಲಹಳ್ಳಿ ಬಡಾವಣೆ ಜನರ ಅವಿಭಾಜ್ಯ ಅಂಗವಿದು . 50 ಎಕರೆಗೂ ಹೆಚ್ಚು ವಿಸ್ತಾರ ಹೊಂದಿರುವ ಕೆರೆ ನೂರಾರು ಎಕರೆಗೆ ನೀರಾವರಿ ಕಲ್ಪಿಸುತ್ತಿದೆ. ಹಿಂದಿನ ಗದ್ದೆ ಬಯಲಲ್ಲಿ ಭತ್ತದ ನಾಟಿ ಮುಗಿದ್ದು ಹಸಿರು ವಾತಾವರಣ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಆದರೆ ಕೆರೆಯಲ್ಲಿ ಹೂಳು ತುಂಬಿದ್ದು ಏರಿಯ ಮೇಲೆ ಗಿಡಗಂಟಿಗಳು ಬೆಳೆದು ನಿಂತಿವೆ. ನೀರಿನೊಳಗೆ ನಾರಿನ ಗಿಡ ಬೆಳೆದಿದ್ದು ಅದು ಕೆರೆಯ ಸೌಂದರ್ಯವನ್ನು ಮುಚ್ಚಿಟ್ಟಿದೆ.

ನಗರದಲ್ಲಿ 50ಕ್ಕೂ ಹೆಚ್ಚು ಉದ್ಯಾನಗಳಿವೆ. ಆದರೆ ವಿಹಾರ ಮಾಡಲು ಅಗತ್ಯ ಸೌಲಭ್ಯ ಹೊಂದಿದ ಕೆರೆಗಳಿಲ್ಲ. ಹೀಗಾಗಿ ಕೋಣನೂರು ಕೆರೆಯನ್ನು ಒಂದು ವಿಹಾರತಾಣವನ್ನಾಗಿ ರೂಪಿಸಬೇಕು ಎಂಬುದು ಬಲುದಿನಗಳ ಬೇಡಿಕೆ. ಆದರೆ ಕೆರೆ ಕೋಣನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರಣ ಅಭಿವೃದ್ಧಿಯಾಗಿಲ್ಲ. ಸುತ್ತಮುತ್ತಲ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸಬೇಕು ಎಂಬ ಒತ್ತಾಯ ಇನ್ನೂ ಈಡೇರಿಲ್ಲ.

ADVERTISEMENT

‘ಈ ಕೆರೆಯನ್ನು ಅಭಿವೃದ್ಧಿಪಡಿಸಿ ಒಂದು ಪ್ರವಾಸಿತಾಣವನ್ನಾಗಿ ರೂಪಿಸಬಹುದು. ನಡುಗಡ್ಡೆ ನಿರ್ಮಿಸಿ ಬೋಟಿಂಗ್‌ ವ್ಯವಸ್ಥೆ ಮಾಡಬಹುದು. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ. ನೀರಿನಲ್ಲಿ ಚರಂಡಿ ನೀರು ಸೇರಿಕೊಂಡಿದ್ದು ಜಲಚರಗಳ ಪ್ರಾಣಕ್ಕೆ ಕುತ್ತು ಉಂಟಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕಲ್ಲಹಳ್ಳಿಯ ಶಿವರುದ್ರಪ್ಪ ಹೇಳಿದರು.

ಚರಂಡಿ ನೀರು ಸೇರ್ಪಡೆ:
ಜಿಲ್ಲೆಯಲ್ಲಿ ಹಲವು ಸಂಪರ್ಕ ಕೆರೆಗಳಿದ್ದು ಅವುಗಳಲ್ಲಿ ಕೋಣನಹಳ್ಳಿ ಕೆರೆಯೂ ಒಂದು. ಇಂಡುವಾಳು– ಸುಂಡಹಳ್ಳಿ–ಕಿರಗಂದೂರು ಕೆರೆಗಳು ತುಂಬಿದ ನಂತರ ಕೋಣನೂರು ಕೆರೆ ತುಂಬುತ್ತದೆ. ನಂತರ ಚಿಕ್ಕಮಂಡ್ಯದ ಕೆರೆಗೆ ನೀರು ಸೇರುತ್ತದೆ. ನಾಲೆ ಸಂಪರ್ಕ ಇರುವ ಕಾರಣ ಕೆಆರ್‌ಎಸ್‌ ಜಲಾಶಯ ತುಂಬಿದಾಗ ಸಂಪರ್ಕ ಕೆರೆಗಳು ತುಂಬಿಕೊಳ್ಳುತ್ತವೆ. ನಗರದ ಹೊರವಲಯದಲ್ಲಿ ಹರಿದು ಬರುವ ನಾಲೆಗೆ ಕೆಲವೆಡೆ ಚರಂಡಿ ನೀರು ಹರಿಯುತ್ತಿದ್ದು ಕೆರೆಯೂ ಮಲಿನವಾಗುತ್ತಿದೆ.

‘ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೋಟೆಲ್‌ಗಳು, ಮದುವೆ ಮಂಟಪಗಳ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿದೆ. ಅಲ್ಲದೆ ಕಲ್ಲಹಳ್ಳಿ ಮೇಲ್ಭಾಗದಿಂದ ಹರಿದು ಬರುವ ನೀರು ಕೂಡ ಸೇರುತ್ತಿದೆ. ಬಯಲಿನ ರೈತರೆಲ್ಲರೂ ಸೇರಿ ಸ್ವಂತ ಹಣದಿಂದ ಸ್ವಲ್ಪ ಭಾಗದ ಹೂಳು ಎತ್ತಿಸಿದೆವು. ನಾರಿನ ಗಿಡವನ್ನು ತೆರವುಗೊಳಿಸಿದೆವು. ಸಂಪೂರ್ಣವಾಗಿ ಹೂಳು ತೆಗೆಸಿ, ಚರಂಡಿ ನೀರು ನಿಯಂತ್ರಿಸಿದರೆ ಇದು ಸುಂದರ ತಾಣವಾಗಲಿದೆ’ ಎಂದು ಶಿವಪ್ರಕಾಶ್‌ಗೌಡ ಹೇಳಿದರು.

‘ಕೋಣನಹಳ್ಳಿ ಕೆರೆಯನ್ನು ಒತ್ತುವರಿ ಸಮಸ್ಯೆಯೂ ಕಾಡುತ್ತಿದೆ. ಕೆರೆಯ ವ್ಯಾಪ್ತಿ ಮೊದಲು ಇದ್ದಷ್ಟು ಈಗ ಇಲ್ಲ. ಈಗಾಗಲೇ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಹಲವು ಕಟ್ಟಡ ನಿರ್ಮಾಣ ಮಾಡಲಾಗಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಪ್ರವಾಸಿ ತಾಣ ನಿರ್ಮಾಣಕ್ಕೆ ಪ್ರಸ್ತಾವ

‘ನಗರದ ಸುತ್ತ ಇರುವ ಕೋಣನಹಳ್ಳಿ ಕೆರೆ, ಹೊಸ ಬೂದನೂರು ಕೆರೆ ಹಾಗೂ ಗುತ್ತಲುಕೆರೆಯನ್ನು ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡಲು ಪ್ರವಾಸೋದ್ಯಮ ಇಲಾಖೆ ಸಚಿವರಾದ ಸಾ.ರಾ.ಮಹೇಶ್‌ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ನಗರದ ಹೊರ ವಲಯಗಳ ಬಡಾವಣೆಗಳನ್ನು ನಗರಕ್ಕೆ ಸೇರಿಸಿಕೊಂಡು ಮಹಾನಗರ ಪಾಲಿಗೆ ರೂಪಿಸುವ ಪ್ರಯತ್ನವೂ ನಡೆಯುತ್ತಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಹೊಸ ರೂಪ ನೀಡಲಾಗುವುದು. ಉದ್ಯಾನ, ಕಲ್ಲು ಬೆಂಚ್‌, ಬೋಟಿಂಗ್‌, ಕಾರಂಜಿ ರೂಪಿಸುವ ಉದ್ದೇಶವಿದೆ. ಶೀಘ್ರ ಈ ಕಾರ್ಯ ಅನುಷ್ಠಾನಗೊಳ್ಳಿದೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.