ADVERTISEMENT

ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ

ಜಿಲ್ಲಾ ಪಂಚಾಯಿತಿ ಮೀಸಲಾತಿ ಪ್ರಕಟ: ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು

ಎಂ.ರವಿ
Published 24 ಏಪ್ರಿಲ್ 2014, 10:51 IST
Last Updated 24 ಏಪ್ರಿಲ್ 2014, 10:51 IST

ಮೈಸೂರು: ಜಿಲ್ಲಾ ಪಂಚಾಯಿತಿ ಮೂರನೇ ಅವಧಿ ಅಂದರೆ, 20 ತಿಂಗಳ ಅವಧಿಗೆ ಮುಂದಿನ ಜೂನ್‌ ಎರಡನೇ ವಾರದಲ್ಲಿ ನಡೆಯಬೇಕಿದ್ದ ಚುನಾವಣೆಗೆ ರಾಜ್ಯ ಸರ್ಕಾರ ಮೊದಲೇ ಮೀಸಲಾತಿ ಪ್ರಕಟಿಸಿದೆ.

ಮೈಸೂರು ಜಿಲ್ಲಾ ಪಂಚಾಯಿತಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

46 ಸದಸ್ಯರ ಬಲಾಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 21, ಜೆಡಿಎಸ್‌ 16 ಮತ್ತು ಬಿಜೆಪಿ 8 ಹಾಗೂ ಪಕ್ಷೇತರ 1 ಸ್ಥಾನ ಪಡೆದಿವೆ. ಜಿಲ್ಲಾ ಪಂಚಾಯಿತಿ ಅಧಿಕಾರ ಗದ್ದುಗೆ ಹಿಡಿಯಲು 24 ಸದಸ್ಯರ ಬೆಂಬಲ ಬೇಕು.

ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಜೆಡಿಎಸ್‌ನ ಸುನೀತಾ ವೀರಪ್ಪಗೌಡ ಅಧ್ಯಕ್ಷರಾಗಿ, ಬಿಜೆಪಿಯ ಡಾ.ಶಿವರಾಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ದ್ದರು. ಅಧಿಕಾರ ಹಂಚಿಕೆ ಪ್ರಕಾರ ಸುನೀತಾ ವೀರಪ್ಪಗೌಡ ಹತ್ತು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಆದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ರಾಜೀನಾಮೆ ಪ್ರಹಸನ ಮುಗಿಯುವ ವೇಳೆಗೆ 17 ತಿಂಗಳು ಕಳೆದು, ಮೂರು ತಿಂಗಳು ಮಾತ್ರ ಬಾಕಿ ಇತ್ತು. ಈ ಅವಧಿಗೆ ಜೆಡಿಎಸ್‌ನ ಭಾಗ್ಯಾ ಶಿವಮೂರ್ತಿ, ಬಿಜೆಪಿಯ ಎಚ್‌.ಆರ್‌. ಭಾಗ್ಯಲಕ್ಷ್ನೀ ಉಪಾಧ್ಯಕ್ಷರಾಗಿದ್ದರು.

ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಯಿತು. ಜೆಡಿಎಸ್‌–ಬಿಜೆಪಿ ಮೈತ್ರಿ ಮುಂದುವರಿಯಿತು. ಬಿಜೆಪಿಯ ಕಾ.ಪು. ಸಿದ್ದವೀರಪ್ಪ ಅಧ್ಯಕ್ಷರಾಗಿ, ಜೆಡಿಎಸ್‌ನ ಎಂ.ಕೆ. ಸುಚಿತ್ರಾ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಪ್ಪಂದದ ಪ್ರಕಾರ ಹತ್ತು ತಿಂಗಳ ಅವಧಿ ಮುಗಿದ ನಂತರ ಇತರರಿಗೆ ಈ ಇಬ್ಬರು ಅವಕಾಶ ನೀಡಬೇಕಾಗಿತ್ತು.

ಆದರೆ, ಇವರು ಸಹ ವಿಳಂಬ ಮಾಡಿದರು. ಕಾ.ಪು. ಸಿದ್ದವೀರಪ್ಪ ರಾಜೀನಾಮೆ ಹಿಂಪಡೆಯುವ ನಾಟಕವಾಡಿದರೂ ಅದು ಫಲಿಸಲಿಲ್ಲ. ಅಂತಿಮವಾಗಿ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆ ಅಂಗೀಕಾರವಾಯಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಸಿ.ಜೆ. ದ್ವಾರಕೀಶ್‌ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ನಂತರ ಕಾಂಗ್ರೆಸ್‌ನ ಕೂರ್ಗಳ್ಳಿ ಎಂ. ಮಹದೇವು ಅಧ್ಯಕ್ಷರಾಗಿ, ಅದೇ ಪಕ್ಷದ ಭ್ರಮರಾಂಬಾ ಮಲ್ಲಿಕಾರ್ಜುನಸ್ವಾಮಿ ಉಪಾಧ್ಯಕ್ಷರಾಗಿ ಕಳೆದ ಸೆ. 18ರಂದು ಆಯ್ಕೆಯಾಗಿದ್ದರು.

ಕಾಂಗ್ರೆಸ್‌ಗೆ 21 ಸದಸ್ಯರು ಹಾಗೂ ಪಕ್ಷೇತರ ಸದಸ್ಯ ಎಲ್‌. ಮಾದಪ್ಪ ಅವರ ಬೆಂಬಲವಿದೆ. ಜೆಡಿಎಸ್‌–ಬಿಜೆಪಿ ಸದಸ್ಯರಿಗೆ 24 ಸದಸ್ಯರ ಬೆಂಬಲ ಇದ್ದರೂ ಸಿ.ಟಿ. ರಾಜಣ್ಣ ಯಾರನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಅಲ್ಲದೆ, ಪದ್ಮಾ ಬಸವರಾಜು ಅವರ ಪತಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಪದ್ಮಾ ಅವರು ಯಾವ ಪಕ್ಷ ಬೆಂಬಲಿಸುತ್ತಾರೋ ಗೊತ್ತಿಲ್ಲ. ಈ ಇಬ್ಬರು ಸದಸ್ಯರು ಗೈರು ಹಾಜರಾದರೆ 22–22 ಸದಸ್ಯರ ಬೆಂಬಲ ಇದ್ದು, ಲಾಟರಿ ಮೂಲಕ ಆಯ್ಕೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ.

ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ಅವರು ಜಿ.ಪಂ. ಅಧ್ಯಕ್ಷ ಸ್ಥಾನವನ್ನು ಪ.ಜಾತಿಗೆ ಮೀಸಲಾತಿ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಸದಸ್ಯೆ ಅಮರಾವತಿ ಪುಷ್ಪನಾಥ್‌ ಅವರು ಮಂಜುನಾಥ್‌ ಅವರ ನಾದಿನಿ. ಇವರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕರು ತವಕಿಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಮರಾವತಿ  ಹೊರತುಪಡಿಸಿ, ಸುಧಾ ಮಹದೇವಯ್ಯ, ಗೀತಾ ಧರ್ಮೇಂದ್ರ, ಕಾವೇರಿ ಶೇಖರ್‌ ಸಹ ಅರ್ಹರು. ಜೆಡಿಎಸ್‌–ಬಿಜೆಪಿ ಮೈತ್ರಿಕೂಟದಿಂದ ಎಚ್.ಆರ್‌. ಭಾಗ್ಯಲಕ್ಷ್ಮೀ ಮಾತ್ರ ಅರ್ಹರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟಿದೆ. ಈಗಿರುವ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ ಬರುವ ಜೂನ್ 10ಕ್ಕೆ ಮುಗಿಯಲಿದೆ. ಅವಧಿ ಪೂರ್ಣಗೊಳ್ಳುವ ವಾರದ ಮೊದಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜಕೀಯ ಚಟುವಟಿಕೆ ಗರಿಗೆದರಲಿದೆ.

ಸದಸ್ಯರ ಮೇಲಿನ ದೂರು ವಾಪಸ್‌
ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ ಹಾಗೂ ಕೆಂಪಣ್ಣ ಅವರು ವಿಪ್‌ ಉಲ್ಲಂಘಿಸಿದ್ದು, ಪಕ್ಷಾಂತರ ಕಾಯ್ದೆಯನ್ವಯ ಇಬ್ಬರನ್ನೂ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪಕ್ಷ ದೂರು ಸಲ್ಲಿಸಿತ್ತು. ಆದರೆ, ಇನ್ನು ಮುಂದೆ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಪಕ್ಷ ಹೇಳಿದ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ಹೇಳಿದ್ದರಿಂದ ಬಿಜೆಪಿ ಆಯೋಗಕ್ಕೆ ನೀಡಿದ ದೂರನ್ನು ವಾಪಸ್‌ ಪಡೆದಿದೆ.

ಅಧ್ಯಕ್ಷ ಸ್ಥಾನಕ್ಕೆ ಅರ್ಹರು
ಡಾ.ಪುಷ್ಪಾವತಿ ಅಮರನಾಥ್‌, ಎಂ. ಸುಧಾ ಮಹದೇವಯ್ಯ, ಗೀತಾ ಧರ್ಮೇಂದ್ರ, ಕಾವೇರಿ ಶೇಖರ್‌ (ಎಲ್ಲರೂ ಕಾಂಗ್ರೆಸ್‌), ಎಚ್‌.ಆರ್‌. ಭಾಗ್ಯಲಕ್ಷ್ಮೀ (ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.