ADVERTISEMENT

ಅನಿರ್ದಿಷ್ಟಾವಧಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 24 ಮೇ 2016, 9:42 IST
Last Updated 24 ಮೇ 2016, 9:42 IST

ಎಚ್.ಡಿ.ಕೋಟೆ: ಡಾ.ಮುಜಾಫರ್ ಅಸ್ಸಾದಿ ವರದಿ ಹಾಗೂ ವಿವಿಧ ಕಾಯ್ದೆಗಳನ್ನು ಸಮರ್ಪಕವಾಗಿ ಅನು ಷ್ಠಾನ ಮಾಡುವಂತೆ ಒತ್ತಾಯಿಸಿ ಬುಡಕಟ್ಟು ಕೃಷಿಕರ ಸಂಘ, ಕರ್ನಾಟಕ ಅರಣ್ಯ ಮೂಲಭೂತ ಹಕ್ಕುಗಳ ಒಕ್ಕೂಟ ಹಾಗೂ ಅರಣ್ಯವಾಸಿ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಆರಂಭಿಸಲಾಗಿದೆ.

ಬುಡಕಟ್ಟು ಕೃಷಿಕರ ಸಂಘದ ಮುಖಂಡ ಕಾಳ ಕಲ್ಕರ್ ಮಾತನಾಡಿ, ಆಶ್ರಮ ಶಾಲೆಗಳು ಅನಾಥಾಶ್ರಮ ಗಳಂತಾಗಿ, ಗಂಜಿ ಕೇಂದ್ರಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯಗಳು ಇರುವುದಿಲ್ಲ. ಸರ್ಕಾರ ಈ ಕೂಡಲೇ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗಿರಿಜನ ಆದಿವಾಸಿಗಳಿಗೆ ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಿಸುವುದು, ವಾಸ ಮಾಡುವುದೂ ಸೇರಿದಂತೆ ವಿವಿಧ ಅವಕಾಶವಿದ್ದರೂ ಸಹ ಅರಣ್ಯ ಇಲಾಖೆಯವರು ವಿನಾಕಾರಣ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅರಣ್ಯ ಇಲಾಖೆಯ ನೌಕರರಿಗೆ ಕಾನೂನಿನ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಗೊಂದು ಆದೇಶ ಹೊರಡಿಸಲಾಗುತ್ತಿದೆ. ಕೊಡಗಿನಲ್ಲಿ ಕುಟುಂಬಕ್ಕೆ 30 ಕೆ.ಜಿ ಅಕ್ಕಿ ನೀಡುತ್ತಿದ್ದರೆ ಮೈಸೂರು ಜಿಲ್ಲೆಯಲ್ಲಿ ಯುನಿಟ್ ಪದ್ಧತಿ ಜಾರಿಯಲ್ಲಿದೆ. ಈ ತಾರತಮ್ಯ ಹೋಗಲಾಡಿಸಬೇಕು ನಮಗೆ ಸಿಗಬೇಕಾದ ಕಾನೂನಾತ್ಮಕ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮುಂತಾದ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದಾರೆ ಎಂದು ಹೇಳಳಿದರು.

‘ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ಆದಿವಾಸಿ ಜನರಿಗೆ ಶವ ಸಂಸ್ಕಾರ ಮಾಡಲು ಅರಣ್ಯದೊಳಗೆ ಇರುವ ಸ್ಮಶಾನದಲ್ಲಿ ಇಲಾಖೆಯವರು ಅವಕಾಶ ನೀಡುತ್ತಿಲ್ಲ’  ಎಂದು ಆದಿವಾಸಿ ಮುಖಂಡ ವಿಜಯಕುಮಾರ್ ಆರೋಪಿಸಿದರು.

ಆದಿವಾಸಿಗಳಾದ ನಾವುಗಳು ಕುಡಿಯಲು ನೀರು ಬೇಕು ಎಂದು ಪ್ರತಿಭಟನೆ ಮಾಡಿದರೂ ಸಹ ನೀರು ನೀಡಲು ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಇಂತಹ ಕೆಟ್ಟ ಸರ್ಕಾರದ ವಿರುದ್ಧ  ನಮ್ಮ ಹಕ್ಕನ್ನು ಪಡೆಯುವವರೆಗೂ ನಿರಂತರವಾಗಿ ಹೋರಾಡಬೇಕಾದ ಅನಿವಾರ್ಯತೆ ಯಿದೆ ಎಂದರು.

ಶೈಲೇಂದ್ರ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಸರ್ಕಾರಿ ಗಿರಿಜನ ಆಶ್ರಮ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದದೆ ಇರುವುದರಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಆಶ್ರಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕೌಶಲ ತರಬೇತಿಯಿಲ್ಲದ್ದರಿಂದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರು.

ಧರಣಿ ಸತ್ಯಾಗ್ರಹದಲ್ಲಿ ಬುಡಕಟ್ಟು ಕೃಷಿಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಚಯ್ಯ, ಮೀನು ಸಹಕಾರ ಸಂಘದ ಅಧ್ಯಕ್ಷ ಕಾವೇರ, ಮುಖಂಡರಾದ ಪುಟ್ಟಬಸವಯ್ಯ, ಶೈಲೇಂದ್ರ, ಚಿಕ್ಕಬೊಮ್ಮ, ರಾಮುಕಲ್ಕರ್, ಭಾಗ್ಯ, ಜಯಮ್ಮ, ಶಿವಮ್ಮ, ಮಾಚಮ್ಮ, ಹಾಗೂ ನೂರಕ್ಕು ಹೆಚ್ಚು ಆದಿವಾಸಿ ಜನರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.