ADVERTISEMENT

ಅನುದಾನ ನೀಡದೆ ಸತಾಯಿಸುತ್ತಿರುವ ಸರ್ಕಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 3:29 IST
Last Updated 19 ನವೆಂಬರ್ 2017, 3:29 IST

ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಅಧ್ಯಕ್ಷೆ ನಯೀಮಾ ಸುಲ್ತಾನಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜೆಡಿಎಸ್‌ ಸದಸ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರು ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ನಾಂದಿಹಾಡಿದರು.

‘ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿ ಮೈಸೂರು ಜಿಲ್ಲಾ ಪಂಚಾಯಿತಿ ಯಲ್ಲಿ ಒಟ್ಟು 49 ಸದಸ್ಯರಿದ್ದೇವೆ. ಸರ್ಕಾರ ಪ್ರತಿ ಸದಸ್ಯರಿಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಕೇವಲ ₹ 10ರಿಂದ 11 ಲಕ್ಷ ಮಾತ್ರ ನೀಡುತ್ತಿದೆ. ಈ ಮೊತ್ತ ಯಾವುದಕ್ಕೂ ಸಾಕಾಗುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸದಸ್ಯರು ವಿಫಲರಾಗಿ ದ್ದಾರೆ. ಸದಸ್ಯರು ಸಾಮಾನ್ಯ ಸಭೆ ಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಕೂಡಾ ಕಳೆದುಕೊಂಡಿದ್ದಾರೆ. ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದೇವೆ. ಜನರ ಬೇಡಿಕೆಗಳನ್ನು ಈಡೇರಿಸಲು ಆಗದಿದ್ದರೆ, ಅಧಿಕಾ ರದಲ್ಲಿದ್ದು ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

ಕುಡಿಯುವ ನೀರಿನ ಕಾಮಗಾರಿ ಗಳಿಗೆ ಕ್ರಿಯಾ ಯೋಜನೆ ಸಲ್ಲಿಸಿದ್ದರೂ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆಗೆ ಅನುಮತಿ ನೀಡಿಲ್ಲ. ಕ್ಷೇತ್ರವಾರು ತುರ್ತು ಕಾಮಗಾರಿಗೆ ಅಗತ್ಯವಿರುವ ಹಣವನ್ನು ಸರ್ಕಾರ ಕೊಡಲೇಬೇಕು. ತುರ್ತು ಕಾಮಗಾರಿಗಳಿಗೆ  ಆಗಸ್ಟ್‌ನಲ್ಲಿ ₹ 10.73 ಕೋಟಿ ಮತ್ತು ಸೆಪ್ಟೆಂಬರ್‌ನಲ್ಲಿ ₹ 22.32 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಬಸವಣ್ಣ ಅವರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್‌ ಸದಸ್ಯರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಅಧ್ಯಕ್ಷೆ ನಯೀಮಾ ಅವರನ್ನು ಆಗ್ರಹಿಸಿದರು. ಬೆಳಗಾವಿ ಅಧಿವೇಶನ ನಡೆಯುತ್ತಿದ್ದು, ಎಲ್ಲರೂ ಅಲ್ಲಿಗೆ ತೆರಳಿ ಧರಣಿ ಕುಳಿತುಕೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದು ‍ಪುಷ್ಪಾ ಅಮರನಾಥ್‌ ಹೇಳಿದರು.

‘₹ 10.73 ಮತ್ತು ₹ 22.32 ಕೋಟಿ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗಿದೆ. ₹ 10.73 ಕೋಟಿ ಮೊತ್ತದ ಕಾಮಗಾರಿ ಈಗಾಗಲೇ ಕೊನೆ ಗೊಂಡಿದ್ದು, ಹಣ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಉಳಿದ ಮೊತ್ತ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ’ ಎಂದು ಸಿಇಒ ಪಿ.ಶಿವಶಂಕರ್‌ ಪ್ರತಿಕ್ರಿಯಿಸಿದರು.

ತುರ್ತು ಕಾಮಗಾರಿ ಪಟ್ಟಿ ಸಿದ್ಧಪಡಿಸಿ ಕಳುಹಿಸಿದರೂ ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಪಂಚಾಯಿತಿಯ ಅಗತ್ಯ ಏನಿದೆ. ಗ್ರಾಮದಲ್ಲಿ ಕೊಳವೆಬಾವಿ ತೋಡಿಸುವ ಶಕ್ತಿ ಇಲ್ಲದಿದ್ದರೆ ಜಿ.ಪಂ ಸದಸ್ಯರಾಗಿ ಏಕೆ ಇರಬೇಕು ಎಂದು ಬಸವಣ್ಣ ಪ್ರಶ್ನಿಸಿದರು.

ಎಸ್‌ಇಪಿ ಟಿಎಸ್‌ಪಿ (ಪರಿಶಿಷ್ಟ ಜಾತಿ ಉಪಯೋಜನೆ) ಅನುದಾನ ಬೇರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವಂತೆ ಅಧ್ಯಕ್ಷರು, ಸಿಇಒಗೆ ಕೆಲ ಸದಸ್ಯರು ಆಗ್ರಹಿಸಿದರು. ಎಸ್‌ಇಪಿ ಟಿಎಸ್‌ಪಿಯ ಸುಮಾರ ₹ 36 ಕೋಟಿ ಹಣ ಬಾಕಿಯುಳಿದಿದೆ ಎಂದು ಸದಸ್ಯರು ಹೇಳಿದರು.

ವಿಶ್ವಾಸ ಗಳಿಸಲು ವಿಫಲ: ಅಕ್ಟೋಬರ್‌ 24 ಮತ್ತು 30ರಂದು ಕರೆದಿದ್ದ ಸಭೆ ಮುಂದೂಡಲಾಗಿತ್ತು. ಅಧ್ಯಕ್ಷರಿಗೆ ತುರ್ತು ಕೆಲಸವಿದೆ ಎಂಬ ಕಾರಣಕ್ಕೆ ಸಭೆ ಮುಂದೂಡುವುದು ಸರಿಯಲ್ಲ ಎಂದು ಸದಸ್ಯ ಎಂ.ಪಿ.ನಾಗರಾಜು ಹೇಳಿದರು.

‘ಕೋರಂ ಕೊರತೆಯಿಂದ ಸಭೆ ತಡವಾಗಿ ಆರಂಭವಾಗುತ್ತಿದೆ. ಅಧ್ಯಕ್ಷರಿಗೆ ಸದಸ್ಯರ ವಿಶ್ವಾಸ ಗಳಿಸಲು ಸಾಧ್ಯವಾಗದಿರುವುದೇ ಕೋರಂ ಕೊರತೆಗೆ ಕಾರಣ. ಆದ್ದರಿಂದ ಎಲ್ಲ ಸದಸ್ಯರ ವಿಶ್ವಾಸ ಗಳಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಜಿ.ನಟರಾಜು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ರಾಜಣ್ಣ ಹಾಜರಿದ್ದರು.

ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಮಾತಿನ ಚಕಮಕಿ
ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆ ಸದಸ್ಯರಾದ ಎಸ್‌.ಆರ್‌.ನಂದೀಶ್‌ ಅವರು ಸರ್ಕಾರವನ್ನು ಟೀಕಿಸಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.

ರಾಜ್ಯದಲ್ಲಿ ರೋಗಗ್ರಸ್ತ ಸರ್ಕಾರವಿದೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬುದ್ಧಿಯಿಲ್ಲ ಎಂಬುದನ್ನು ಕಾಂಗ್ರೆಸ್‌ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಸರ್ಕಾರ ಕೆಲಸ ಮಾಡುತ್ತಿಲ್ಲ ಎಂಬುದು ಕಾಂಗ್ರೆಸ್‌ನವರಿಗೂ ಮನವರಿಕೆಯಾಗಿದೆ ಎಂದು ನಂದೀಶ್‌ ಹೇಳಿದರು. ಈ ಮಾತಿಗೆ ಪುಷ್ಪಾ ಅಮರನಾಥ್‌, ಡಿ.ರವಿಶಂಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ರಾಜಕೀಯ ತಂದು ಚರ್ಚೆಯ ದಿಕ್ಕುತಪ್ಪಿಸುವುದು ಬೇಡ’ ಎಂದು ಪುಷ್ಪಾ ಹೇಳಿದರು. ನಂದೀಶ್‌ ಆಡಿದ ಮಾತುಗಳನ್ನು ಕಡತದಿಂದ ತೆಗೆಸುವಂತೆ ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು.

ಸದಸ್ಯರ ಹಕ್ಕು ಮೊಟಕು
ಸರ್ಕಾರವು ಜಿಲ್ಲಾ ಪಂಚಾಯಿತಿ ಸದಸ್ಯರ ಹಕ್ಕುಗಳನ್ನು ಕಸಿಯತ್ತಿದೆ ಎಂದು ಸದಸ್ಯರಾದ ಎಂ.ಪಿ.ನಾಗರಾಜು, ಮಂಗಳಾ ಸೋಮಶೇಖರ್‌ ಆರೋಪಿಸಿದರು. ‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ಕುಡಿಯುವ ನೀರಿನ ಯೋಜನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬ ಜಾಹೀರಾತನ್ನು ಸರ್ಕಾರ ಪ್ರಕಟಿಸಲಿ. ನಮಗೆ ನೀಡುವ ₹ 10 ಲಕ್ಷ ಅನುದಾನ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆಗಿದೆ’ ಎಂದು ಮಂಗಳಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.