ADVERTISEMENT

ಆದೇಶ ಹಿಂದಕ್ಕೆ; ಮನವಿ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:39 IST
Last Updated 16 ಜನವರಿ 2017, 6:39 IST
ಆದೇಶ ಹಿಂದಕ್ಕೆ; ಮನವಿ ಸಲ್ಲಿಸಲು ನಿರ್ಧಾರ
ಆದೇಶ ಹಿಂದಕ್ಕೆ; ಮನವಿ ಸಲ್ಲಿಸಲು ನಿರ್ಧಾರ   

ಮೈಸೂರು:  2013ರಲ್ಲಿ ಪಿಯು ಕಾಲೇಜುಗಳೊಂದಿಗೆ ವಿಲೀನ ಗೊಳಿಸಿರುವ ವೃತ್ತಿ ಶಿಕ್ಷಣ ಕೋರ್ಸ್‌ (ಜೆಒಸಿ) ಉಪನ್ಯಾಸಕರಿಗೂ ಬಿ.ಇಡಿ ಕಡ್ಡಾಯ ಮಾಡಿರುವುದನ್ನು ಕೈಬಿಡ ಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಒತ್ತಾಯ ಹಾಕಲು ಪಿಯು ಉಪನ್ಯಾಸಕರ ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರಜ್ಞಾವಂತ ಮತ್ತು ಕಾಳಜಿಯಳ್ಳ ನಾಗರಿಕರ ವೇದಿಕೆ ಸಂಚಾಲಕ ಎಂ.ಲಕ್ಷ್ಮಣ ನೇತೃತ್ವದಲ್ಲಿ ಎಂಜಿನಿಯರು­ಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 2013ರಲ್ಲಿ ಕಾಯಂ­ಗೊಂಡಿರುವ ಈ ಉಪನ್ಯಾಸಕರು 50 ವರ್ಷ ವಯಸ್ಸಿನ ಗಡಿ ದಾಟಿದ್ದು, ನಿವೃತ್ತಿಯ ಆಸುಪಾಸಿನಲ್ಲಿ ಇದ್ದಾರೆ. ಹೀಗಾಗಿ, ಅವರಿಗೆ ಬಿ.ಇಡಿ ಕಡ್ಡಾಯ ಮಾಡಿರುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಲು ಸಭೆಯಲ್ಲಿದ್ದವರು ಒಪ್ಪಿಗೆ ಸೂಚಿಸಿದರು.

1984ರಿಂದ 1999ರವರೆಗೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿ, ಕಾಯಂಗೊಂಡಿದ್ದ ಶಿಕ್ಷಕರು, ಉಪನ್ಯಾಸಕರ ಕಾಲ್ಪನಿಕ ವೇತನ ವಾಪಸ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ 2016ರ ಜೂನ್‌ 8ರಂದು ಹೊರಡಿಸಿರುವ ಆದೇಶವನ್ನು ತಡೆಹಿಡಿಯುವಂತೆ ಸಚಿವರಿಗೆ ಮನವಿ ಮಾಡಲು ಸಮ್ಮತಿ ವ್ಯಕ್ತವಾಯಿತು.

ಕಾಂಗ್ರೆಸ್‌ ಮುಖಂಡ ಅಡಗೂರು ಎಚ್‌.ವಿಶ್ವನಾಥ್‌ ನೇತೃತ್ವದಲ್ಲಿ ಮುಂದಿನ ವಾರ ಸಚಿವ ತನ್ವೀರ್‌ಸೇಠ್‌ ಅವರನ್ನು ಭೇಟಿ ಮಾಡಿ, ಈ ವಿಚಾರಗಳ ಕುರಿತು ಕ್ರಮ ವಹಿಸುವಂತೆ ಕೋರಲು ನಿರ್ಧರಿಸಲಾಯಿತು ಎಂದು ಸಭೆಯಲ್ಲಿದ್ದ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಪದವಿಪೂರ್ವ ಉಪ­ನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಜಿ.­ಸುರೇಶ್‌ಬಾಬು, ಪದವಿಪೂರ್ವ ಉಪನ್ಯಾಸಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಶಿವೇಗೌಡ, ದೇವಣ್ಣ, ಉದಯರವಿ ಪ್ರಕಾಶ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.