ADVERTISEMENT

ಇನ್ನೇನು ಹೊರಡಲಿದೆ ‘ಟ್ರಿನ್‌ ಟ್ರಿನ್‌’ ಸವಾರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:25 IST
Last Updated 12 ಜನವರಿ 2017, 8:25 IST

ಮೈಸೂರು: ದೇಶದ ಮೊದಲ ಸಾರ್ವಜನಿಕ ಬೈಸಿಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆಯಾದ ‘ಟ್ರಿನ್‌ ಟ್ರಿನ್‌’ಗೆ ಬುಧವಾರ ಸಾಂಕೇತಿಕ ಚಾಲನೆ ನೀಡಲಾಯಿತು.
ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಸ್ಥಾಪಿಸಿರುವ ಬೈಸಿಕಲ್‌ ಡಾಕಿಂಗ್‌ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೇಂದ್ರದ ನಗರ ರಸ್ತೆ ಸಾರಿಗೆ ಇಲಾಖೆಯು ಈ ಪರಿಸರ ಸ್ನೇಹಿ ಯೋಜನೆಯನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲು ಉತ್ಸಾಹ ತೋರಿಸಿತ್ತು. ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ಈ ಪ್ರಯತ್ನವನ್ನು ಮಾಡಿವೆ. ನಗರದಲ್ಲಿ ಒಟ್ಟು 52 ಡಾಕಿಂಗ್‌ ಸೆಂಟರ್‌ (ಸೈಕಲ್‌ ನಿಲುಗಡೆ ಕೇಂದ್ರ) ನಿರ್ಮಿಸಲಾಗುತ್ತಿದೆ. ಈಗಾಗಲೇ 36 ಸೆಂಟರ್‌ಗಳನ್ನು ಪೂರ್ಣಗೊಳಿಸಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್‌ ಕಾರ್ಡ್‌ ಶೀಘ್ರ: ಸ್ಮಾರ್ಟ್‌ ಕಾರ್ಡ್ ಮೂಲಕ ಮಾತ್ರ ಈ ಯೋಜನೆ ಬಳಕೆಯಾಗಲಿದೆ. ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಆಕರ್ಷಕ ಆಫರ್‌ಗಳನ್ನು ನೀಡಲಾಗುವುದು. ವಿವಿಧ ಬಗೆಯ ನೋಂದಣಿ ಶುಲ್ಕ ನಿಗದಿಪಡಿಸಿದ್ದು, ಆರಂಭಿಕವಾಗಿ ರಿಯಾಯಿತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಕಾರ್ಡ್‌ ಮೂಲಕ ಒಂದು ಬಾರಿಗೆ ಒಂದು ಬೈಸಿಕಲ್‌ ಮಾತ್ರ ಕೊಂಡೊಯ್ಯಬಹುದು.
ಮಾಜಿ ಮೇಯರ್‌ ಬಿ.ಎಲ್‌.ಭೈರಪ್ಪ ಮಾತನಾಡಿ, ಈ ಯೋಜನೆಗಾಗಿ ‘ಸೈಕಲ್‌ ವಲಯ’ಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಲಲಿತಮಹಲ್‌ ರಸ್ತೆ, ಸಯ್ಯಾಜಿ ರಾವ್‌ ರಸ್ತೆ, ದೇವರಾಜ ಅರಸು ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಬೈಸಿಕಲ್‌ ಸಂಚಾರಕ್ಕಾಗಿ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗುತ್ತಿದೆ. ಪಾಲಿಕೆ ಆಯುಕ್ತ ಜಿ.ಜಗದೀಶ್‌, ಯೋಜನೆಗೆ ಸಹಭಾಗಿತ್ವ ನೀಡಿರುವ ‘ಗ್ರೀನ್‌ ವ್ಹೀಲ್‌ ಡ್ರೈವ್’ ಸಂಸ್ಥೆಯ ಚಿರಾಗ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.