ADVERTISEMENT

ಇ–ಲೈಬ್ರರಿ, ವಿಷುವಲ್‌ ಲೈಬ್ರರಿ ಜನಪ್ರಿಯ

ಸಿರಿನಾಡು ವಿದ್ಯಾರ್ಥಿ ನಿಲಯ, ಸಂಶೋಧನಾ ಕೇಂದ್ರ ಉದ್ಘಾಟಿಸಿದ ಶಾಸಕ ವಿಜಯಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:30 IST
Last Updated 22 ಮೇ 2017, 6:30 IST

ಮೈಸೂರು: ಮಕ್ಕಳು ಗ್ರಂಥಾಲಯಗಳಿಗೆ ತೆರಳಿ ಪುಸ್ತಕ ಓದಲು ಬಯಸುವುದಿಲ್ಲ. ಇಂದು ಇ–ಲೈಬ್ರರಿ ಮತ್ತು ವಿಷುವಲ್‌ ಲೈಬ್ರರಿ ಜನಪ್ರಿಯವಾಗುತ್ತಿವೆ. ಓದಿನ ಶೈಲಿಯಲ್ಲಿ ಬದಲಾವಣೆ ಉಂಟಾಗಿದೆ ಎಂದು ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕ ಬಿ.ಎನ್‌. ವಿಜಯಕುಮಾರ್‌ ಹೇಳಿದರು.

ವಿಶ್ವೇಶ್ವರನಗರದಲ್ಲಿ ಭಾನುವಾರ ಸಿರಿನಾಡು ಭವನ ವಿದ್ಯಾರ್ಥಿ ನಿಲಯ ಹಾಗೂ ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಏನಾದರೂ ಮಾಹಿತಿ ಬೇಕಿದ್ದರೆ ಗ್ರಂಥಾಲಯಗಳಿಗೆ ತೆರಳುವ ಅಗತ್ಯ ಬೀಳುವುದಿಲ್ಲ. ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಇದ್ದರೆ ಕ್ಷಣಾರ್ಧದಲ್ಲಿ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಎಂದರು.

ವಿದ್ಯಾರ್ಥಿನಿಲಯ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಇ–ಲೈಬ್ರರಿ ಹಾಗೂ ವಿಷುವಲ್‌ ಲೈಬ್ರರಿಗಳನ್ನು ಸ್ಥಾಪಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವಾಗಲಿದೆ ಎಂದು ತಿಳಿಸಿದರು.

ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವ ಸಿರಿನಾಡು ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಎಂ.ಕೆ. ಸೋಮಶೇಖರ್‌, ಸಾಂಸ್ಕೃತಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಇನ್ನಷ್ಟು ಪಂಡಿತರನ್ನು ಸಮಾಜಕ್ಕೆ ನೀಡಲಿ ಎಂದರು.

ಹೆತ್ತವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅದರ ಜತೆಗೆ ಸಮಾಜದ ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಅವರಲ್ಲಿ ಮೂಡಿಸಬೇಕು. ಮಕ್ಕಳಿಗೆ ಉತ್ತೇಜನ ಕೊಡುವ ಕೆಲಸವನ್ನು ಸಂಘ, ಸಂಸ್ಥೆಗಳು ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್‌ ತಿಳಿಸಿದರು.

1931ರಲ್ಲಿ ಸ್ಥಾಪನೆಯಾದ ಸಿರಿನಾಡು ಸಂಘ ದೇಶದ ಸಂಸ್ಕೃತಿ, ಪರಂಪರೆಯನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಯೋಗ, ನೃತ್ಯ, ನಾಟಕ, ಕರಕುಶಲ ಕಲೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಇದೀಗ ₹ 1.2 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿ ತನ್ನ ಕೆಲಸದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ನರಹರಿ ಜೋಯಿಸ್‌ ಮಾಹಿತಿ ನೀಡಿದರು.

ವೇದ ಪಂಡಿತ ಲಕ್ಷ್ಮೀನರಸಿಂಹ ಭಟ್ಟ, ಸಿರಿನಾಡು ಸಂಘದ ಅಧ್ಯಕ್ಷ ಅಶ್ವಥನಾರಾಯಣ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ, ಹಿರಿಯ ವಕೀಲ ಎಸ್‌.ಕೆ.ವಿ.ಚಲಪತಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್‌, ಬಿ.ಕೆ. ಸುರೇಶ್‌ಬಾಬು, ಎಸ್‌.ಉಮಾಮಣಿ ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.