ADVERTISEMENT

ಊಳಿಗಮಾನ್ಯರಾಗಿರುವ ಭಾರತೀಯರು

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 11:00 IST
Last Updated 27 ಜೂನ್ 2016, 11:00 IST

ಮೈಸೂರು: ಭಾರತೀಯರು ಇಂದಿಗೂ ಅರೆ ಜಮೀನ್ದಾರಿ, ಊಳಿಗಮಾನ್ಯ ಪದ್ಧತಿಯ ಹೇರಿಕೆಯಲ್ಲೇ ಬದುಕುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ಭಾನುವಾರ ವಿಷಾದಿಸಿದರು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಡಾ.ರಾಮಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದೊಂದಿಗೆ ರಂಗಾಯಣದಲ್ಲಿ ಏರ್ಪಡಿಸಿದ್ದ ‘ಪ್ರೊ.ಕೆ. ರಾಮದಾಸ್ ನೆನಪಿನ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ರಿಗೆ ನಿಜವಾದ ಪ್ರಜಾಪ್ರಭುತ್ವ ಏನು ಎನ್ನುವುದು ಇನ್ನೂ ಅರಿವಿಗೆ ಬಂದಿಲ್ಲ. ಪ್ರಜೆ ಗಳಿಗೆ ಇರುವ ಶಕ್ತಿಯ ನಿಜ ಅರಿವೂ ಇಲ್ಲ. ಪ್ರಜಾಪ್ರಭುತ್ವದ ಮಾದರಿಯನ್ನಷ್ಟೇ ನಾವೆಲ್ಲಾ ನೋಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಮುಖ್ಯ ಆಶಯವೇ ಭಿನ್ನ ನಿಲುವುಗಳನ್ನು ಗೌರವಿಸುವುದು. ಆದರೆ, ಇಂದು ಭಿನ್ನ ಅಭಿಪ್ರಾಯಗಳನ್ನು ಗೌರವಿಸುವುದು ಕಡಿಮೆಯಾಗಿದೆ. ರಾಮರಾಜ್ಯ ಸ್ಥಾಪಿಸಬೇಕೆಂಬ ರಾಮನ ಆರಾಧಕರು ರಾಮನ ರಾಜನೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇಲ್ಲ. ರಾಮನು ವನವಾಸದಿಂದ ಹಿಂತಿರುಗಿದಾಗ ಎಲ್ಲಾ ಪ್ರಜೆಗಳ ಕ್ಷೇಮ ವಿಚಾರಿಸಿದಂತೆ ಚಾರ್ವಾಕರ ಕ್ಷೇಮವನ್ನು ವಿಚಾರಿಸಿದ್ದನು. ಆದರೆ, ಇಂದು ಭಿನ್ನ ಚಿಂತನೆಗಳನ್ನು, ವೈಚಾರಿಕತೆಯನ್ನು ಒಪ್ಪುವ ಮನಸ್ಥಿತಿ ಕಡಿಮೆಯಾಗಿ ರುವುದು ವಿಷಾದದ ಸಂಗತಿ ಎಂದರು.

ಧಾರ್ಮಿಕ ಅಸಹಿಷ್ಣುತೆ ಭಾರತದ ಮಠಗಳಲ್ಲಿ ಹಿಂದೆ ಇರಲಿಲ್ಲ ಎಂದಲ್ಲ. ಆದರೆ, ಧಾರ್ಮಿಕ ಅಸಹನೆಯು ಇಂದು ಇರುವ ಮಟ್ಟಕ್ಕೆ ಇರಲಿಲ್ಲ. ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಚಿಂತನೆಯನ್ನು ಅಡಗಿಸುವ ಹಿಂಸಾತ್ಮಾಕ ರೂಪ ಕಾಣುತ್ತಿರುವುದು ದುರಂತದ ಸಂಗತಿ ಎಂದು ಅವರು ತಿಳಿಸಿದರು.

ಪ್ರೊ.ಕೆ.ರಾಮದಾಸ್‌ ಅವರು ವೈಚಾರಿಕತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾದರಿಯಂತಿದ್ದರು ನಿಜ. ಆದರೆ, ಅವರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳದೇ ಹೋದದ್ದು ದೊಡ್ಡ ನಷ್ಟ ಎಂದರು.

ಸಂಘಟನೆ ಕಡಿಮೆಯಾಗಿದೆ: ಲೇಖಕ ಕೃಷ್ಣ ಜನಮನ ಸಂಪಾದನೆಯ ‘ಧರ್ಮವೆಂಬ ಸೂತಕ’ ಪುಸ್ತಕ ಬಿಡುಗಡೆಮಾಡಿ ಮಾತನಾಡಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಮೈಸೂರಿನಲ್ಲಿ ರಾಮದಾಸ್ ನಿಧನರಾದ ಬಳಿಕ ವೈಚಾರಿಕ ಸಂಘಟನೆ, ಕಟ್ಟುವಿಕೆ ಇಲ್ಲವಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲಂತೂ ಪ್ರಗತಿಪರ ಸಂಘಟನೆ ಕ್ಷೀಣಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.